"ಗರ್ಲ್‌ಫ್ರೆಂಡ್’ ಮೊದಲ ಸ್ವರ : ರಶ್ಮಿಕಾ ಮಂದಣ್ಣ, ದೀಕ್ಷಿತ್ ಶೆಟ್ಟಿ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ

rashmok
Published on

‘ಪುಷ್ಪ 2: ದ ರೂಲ್’, ‘ಛಾವಾ’ ಹಾಗೂ ‘ಕುಬೇರ’ದಂತಹ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಇದೀಗ ‘ದ ಗರ್ಲ್‌ಫ್ರೆಂಡ್’ ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ, ‘ದಿಯಾ’, ‘ಬ್ಲಿಂಕ್’ ನಟ ದೀಕ್ಷಿತ್ ಶೆಟ್ಟಿಗೆ ಜೋಡಿಯಾಗಿದ್ದಾರೆ. ಈ ಮೂಲಕ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಕನ್ನಡ ಕಲಾವಿದರ ಕಲರವ ಆಗಿರುವುದು ಮತ್ತೊಂದು ವಿಶೇಷ. ಈಗಾಗಲೇ ಶೂಟಿಂಗ್ ಮುಗಿಸಿ, ಪೋಸ್ಟ್-ಪ್ರೊಡಕ್ಷನ್‌ನಲ್ಲಿ ಬಿಜಿಯಿರುವ ಚಿತ್ರತಂಡ ಇನ್ನೇನು ಪ್ರಚಾರಕ್ಕೆ ಧುಮುಕುವ ಮುನ್ನ ಚಿತ್ರದ ಮೊದಲ ಸಾಂಗ್ ಬಿಡುಗಡೆ ಮಾಡಲಾಗಿದೆ. ಅದರಲ್ಲೂ ಕನ್ನಡದಲ್ಲಿ ‘ಸ್ವರವೇ’ ಎಂಬ ಗೀತೆಯು ಸೊಗಸಾಗಿ ಮೂಡಿಬಂದಿದೆ. ನಾಗಾರ್ಜನ್ ಶರ್ಮಾ ರಚಿಸಿದ್ದು, ‘ಹೃದಯಂ’ ಖ್ಯಾತಿಯ ಹೇಷಮ್ ಅಬ್ದುಲ್ ವಹಾಬ್ ಸಂಗೀತ ನೀಡುವ ಜತೆಗೆ ಹಾಡಿಗೆ ಧ್ವನಿಯಾಗಿದ್ದಾರೆ. ಈ ಗೀತೆಯಲ್ಲಿ ರಶ್ಮಿಕಾ, ಧೀಕ್ಷಿತ್ ಕಾಂಟೆಂಪರರಿ ಫ್ರೀಸ್ಟೈಲ್ ಡಾನ್ಸ್ ಮೂಲಕ ಹಾಡಿಗೆ ಮೆರುಗು ತಂದಿದ್ದಾರೆ. ಈ ಸುಂದರ ಪ್ರೇಮಕಥೆಗೆ ‘ಮನ್ಮಧುಡು’ ಖ್ಯಾತಿಯ ತೆಲುಗು ನಿರ್ದೇಶಕ ರಾಹುಲ್ ರವೀಂದ್ರನ್ ಆ್ಯಕ್ಷನ್-ಕಟ್ ಹೇಳಿದ್ದಾರೆ. -ಏಜೆನ್ಸೀಸ್

ರಶ್ಮಿಕಾ ಹರ್ಷ: ‘ಕಾಂಟೆಂಪರರಿ ಫ್ರೀಸ್ಟೈಲ್’ ನೃತ್ಯ ಪ್ರಕಾರಗಳಲ್ಲಿ ಒಂದು. ಯುರೋಪ್ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ನೃತ್ಯವು ಕ್ಲಾಸಿಕಲ್, ಮಾಡರ್ನ್ ಹಾಗೂ ಜಾಜ್ ಶೈಲಿಯಲ್ಲಿ ಮೂಡಿಬರುತ್ತದೆ. ಇದೇ ಶೈಲಿಯಲ್ಲಿ ‘ದ ಗರ್ಲ್‌ಫ್ರೆಂಡ್’ ಚಿತ್ರದ ಮೊದಲ ಹಾಡಿನಲ್ಲಿ ರಶ್ಮಿಕಾ, ದೀಕ್ಷಿತ್ ಹೆಜ್ಜೆ ಹಾಕಿದ್ದಾರೆ. ಕನ್ನಡದಲ್ಲಿ ಈ ಹಿಂದೆ ‘ನೀನೆ’ ಎಂಬ ಅಲ್ಬಂ ಸಾಂಗ್ ಇದೇ ಪ್ರಕಾರದಲ್ಲಿ ಮೂಡಿಬಂದಿತ್ತು. ಹಾಗೆಯೇ ಹಾಡಿನ ಸಕ್ಸಸ್ ಬಗ್ಗೆ ರಶ್ಮಿಕಾ, ‘ಮೊದಲ ಬಾರಿಗೆ ಕೇಳಿದಾಗಿನಿಂದಲೂ ಈ ಹಾಡು ನನಗೆ ಆಪ್ತವಾಗಿದೆ. ಮೃದು ಹಾಗೂ ಭಾವನಾತ್ಮಕವಾಗಿದೆ. ನೀವು ತನ್ನಷ್ಟಕ್ಕೆ ತಾನೇ ಈ ಹಾಡನ್ನು ಪದೇ ಪದೇ ಗುನುಗಬಹುದು. ಈ ಸಾಂಗ್ ಶೂಟಿಂಗ್ ಮಾಡುವಾಗ ನನ್ನ ಚಿಕ್ಕ ಫ್ರೇಮ್‌ನಲ್ಲಿದ್ದೇನೆ ಎಂಬಂತೆ ಅನಿಸುತ್ತಿತ್ತು. ಪ್ರತಿ ದೃಶ್ಯ ನಿಮ್ಮ ಹೃದಯವನ್ನು ತುಂಬಿಸುತ್ತದೆ ಎಂದು ಭಾವಿಸಿದ್ದೇನೆ’ ಎಂದು ಖುಷಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net