ನಾವು ಐವರು ನಿನ್ನನ್ನು ಹಂಚಿಕೊಳ್ತೇವೆ ಕರೆದಾಗ ಬರ್ತೀಯಾ? ಕನ್ನಡದ ಸ್ಟಾರ್​ ನಟಿಯ ಸ್ಫೋಟಕ ಹೇಳಿಕೆ | Kannada Actress

Kannada Actress
Published on

ಬೆಂಗಳೂರು: ಕೇರಳದಲ್ಲಿ ಹೇಮಾ ಸಮಿತಿ ವರದಿ ( Hema committee report ) ಬಿಡುಗಡೆಯಾದ ನಂತರ ಮಲಯಾಳಂ ( Malayalam ) ಚಿತ್ರರಂಗದ ಕರಾಳ ಮುಖ ಅನಾವರಣಗೊಂಡಿದೆ. ತಾವು ಎದುರಿಸಿದ ಲೈಂಗಿಕ ಶೋಷಣೆಯ ಬಗ್ಗೆ ಅನೇಕ ನಟಿಯರು ಬಹಿರಂಗ ಪಡಿಸಲು ಮುಂದಾಗಿದ್ದಾರೆ. ಅನೇಕ ನಟರ ನಿಜ ಮುಖ ಬಯಲಾದ ಕೂಡಲೇ ಮಲಯಾಳಂ ಸಿನಿಮಾ ಪ್ರೇಕ್ಷಕರು ಆಘಾತಕ್ಕೆ ಒಳಗಾಗಿದ್ದಾರೆ. ಲೈಂಗಿಕ ದೌರ್ಜನ್ಯ ಬಗ್ಗೆ ಸಾಕಷ್ಟು ಮಂದಿ ಧ್ವನಿ ಎತ್ತಿದ ಕೂಡಲೇ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ನೇಮಿಸಿ, ತನಿಖೆ ನಡೆಸಿ, ಹಲವರ ಬಂಧನ ಸೇರಿದಂತೆ ಕಾನೂನು ಕ್ರಮ ಜರುಗಿಸಲಾಗಿದೆ.

ಒಂದು ತಿಂಗಳು ಕಳೆದರೂ ಹೇಮಾ ಸಮಿತಿ ವರದಿ ಭಾರಿ ಚರ್ಚೆಯಾಗುತ್ತಿದ್ದು, ಆರೋಪ ಪ್ರತ್ಯಾರೋಪ ಮುಂದುವರಿದಿದೆ. ಕೇರಳದ ಬೆಳವಣಿಗೆಗಳ ನಂತರ, ಇತರೆ ಭಾಷೆಯ ನಟಿಯರು ಕೂಡ ನಮ್ಮಲ್ಲೂ ಇಂಥದ್ದೊಂದು ಸಮಿತಿ ರಚನೆ ಆಗಬೇಕೆಂದು ಸರ್ಕಾರದ ಮುಂದೆ ಪ್ರಸ್ತಾಪ ಇಟ್ಟಿದ್ದಾರೆ. ಅಲ್ಲದೆ, ತಮಗಾದ ಕಹಿ ಅನುಭವಗಳನ್ನು ಸಹ ಬಹಿರಂಗಪಡಿಸುತ್ತಿದ್ದಾರೆ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್​ ನಟಿ ( Kannada Actress ) ಎನಿಸಿಕೊಂಡಿದ್ದ ಶ್ರುತಿ ಹರಿಹರನ್ ( Sruthi Hariharan ) ಕೂಡ ಇದೇ ರೀತಿಯ ಆರೋಪ ಮಾಡಿದ್ದಾರೆ. ಈ ಹಿಂದೆ ಅಂದರೆ 2018 ರಲ್ಲಿ ತನಗೆ ಆದ ಅನುಭವವನ್ನು ಬಹಿರಂಗಪಡಿಸಿದ್ದಾರೆ. ತಮಿಳಿನ ದೊಡ್ಡ ನಿರ್ಮಾಪಕರೊಬ್ಬರು ನನ್ನ ಕನ್ನಡ ಚಿತ್ರದ ರಿಮೇಕ್ ಹಕ್ಕುಗಳನ್ನು ಖರೀದಿಸಿದ್ದರು. ಒಂದು ದಿನ ನನಗೆ ಕರೆ ಮಾಡಿದರು. ಕನ್ನಡದಲ್ಲಿ ಮಾಡಿದ ಪಾತ್ರವನ್ನೇ ತಮಿಳಿನಲ್ಲೂ ಮಾಡಬೇಕು ಎಂದರು. ಅಲ್ಲದೆ, ನಮ್ಮಲ್ಲಿ ಐವರು ನಿರ್ಮಾಪಕರಿದ್ದಾರೆ, ಯಾವಾಗ ಬೇಕಾದರೂ ನಿನ್ನನ್ನು ಬಳಸಿಕೊಳ್ಳಬಹುದು ಕರೆದಾಗ ಬರ್ತೀಯಾ ಎಂದು ಕೇಳಿದರು. ಈ ಮಾತುಗಳನ್ನು ಕೇಳಿ ನನಗೆ ಕೋಪ ಬಂತು. ನನ್ನ ಕೈಯಲ್ಲಿ ಶೂ ಇದೆ, ಯಾರಾದರೂ ನನ್ನ ಹತ್ತಿರ ಬಂದರೆ ಹೊಡೆಯುತ್ತೇನೆ ಎಂದಿದ್ದೆ ಎಂದು ಶ್ರುತಿ ಹರಿಹರನ್ ಕಹಿ ಘಟನೆ ಮೆಲುಕು ಹಾಕಿದರು.​

ಇನ್ನು ಈ ಘಟನೆಯ ನಂತರ ತಮಿಳಿನಿಂದ ಒಳ್ಳೆಯ ಪಾತ್ರಗಳ ಆಫರ್‌ಗಳು ಬರಲಿಲ್ಲ ಎಂದು ಶ್ರುತಿ ಹೇಳಿದ್ದಾರೆ. ಹೆಂಗಸರು ಧ್ವನಿ ಎತ್ತಿ, ಬೇಡ ಎನ್ನುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ.

Sruthi Hariharan

ಅಂದಹಾಗೆ ಈ ಹಿಂದೆ ಶ್ರುತಿ ಹರಿಹರನ್​ ಅವರು ನಟ ಅರ್ಜುನ್​ ಸರ್ಜಾ ವಿರುದ್ಧ ಮೀಟೂ ಆಟೋಪ ಮಾಡಿದ್ದರು. ಇದು ಕನ್ನಡ ಚಿತ್ರರಂಗದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದೇ ಪ್ರಕರಣ ಪೊಲೀಸ್​ ಠಾಣೆಯ ಮೆಟ್ಟಿಲೇರಿತ್ತು. ಈ ಪ್ರಕರಣದ ಬಳಿಕ ಚಿತ್ರರಂಗದಿಂದ ದೂರ ಸರಿದ ಶ್ರುತಿ ಹರಿಹರನ್​, ಸದ್ಯ ಮದುವೆಯಾಗಿ ವೈವಾಹಿಕ ಜೀವನದತ್ತ ಗಮನ ಹರಿಸಿದ್ದಾರೆ.

ಏನಿದು ಹೇಮಾ ಸಮಿತಿ ವರದಿ?

ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್​ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಮಲಯಾಳಂ ಸಿನಿರಂಗದ ಒಂದೊಂದೆ ಕರಾಳ ಮುಖವಾಡ ಕಳಚಿ ಬೀಳುತ್ತಿದೆ. ಸಿನಿಮಾದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಆದರೆ, ಸಿನಿಮಾರಂಗದಲ್ಲಿ ವ್ಯಾಪಕವಾಗಿದೆ ಎನ್ನುತ್ತಾರೆ ನೊಂದ ಮಹಿಳೆಯರು. ಸಿನಿಮಾದಲ್ಲಿ ಅವಕಾಶ ಬೇಕಾದರೆ ಕಾಮತೃಷೆ ತೀರಿಸಬೇಕು ಎನ್ನುತ್ತಾರೆ ನೊಂದ ಕಲಾವಿದೆಯರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net