ಕಚೇರಿ. ತುಂಬು ಗರ್ಭಿಣಿಯೊಬ್ಬಳು ವೃದ್ಧರೊಬ್ಬರ ಜೊತೆಗೆ ಸೇರಿಕೊಂಡು ಆ ಕಚೇರಿಯನ್ನು ಹೈಜಾಕ್ ಮಾಡುತ್ತಾಳೆ. ಅಲ್ಲಿ ಕೆಲಸ ಮಾಡುವ ಕೆಲವರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳುತ್ತಾಳೆ. ತನ್ನ ಬೇಡಿಕೆ ಈಡೇರಿಸದಿದ್ದರೆ, ಬಾಂಬ್ ಉಡಾಯಿಸಿಕೊಂಡು ಸಾಯಿಸುವುದಾಗಿ ಸರ್ಕಾರವನ್ನು ಹೆದರಿಸುತ್ತಾಳೆ. ಅಲ್ಲಿರುವ ಎಲ್ಲರನ್ನೂ ಕಾಪಾಡುವ ಜವಾಬ್ದಾರಿ ಸರ್ಕಾರದ ಮೇಲೆ ಬರುತ್ತದೆ. ಅಷ್ಟೇ ಅಲ್ಲ, ಆಕೆಯ ಬೇಡಿಕೆಗಳನ್ನು ಪೂರೈಸುವುದಕ್ಕೆ ಸಂವಿಧಾನ ಅಡ್ಡಿಯಾಗುತ್ತದೆ. ಅವೆಲ್ಲವನ್ನೂ ದಾಟುವಷ್ಟರಲ್ಲಿ ಏನೆಲ್ಲಾ ಆಗುತ್ತದೆ ಎಂಬುದು ಚಿತ್ರದ ಕಥೆ. ಸಾಮಾನ್ಯವಾಗಿ ಇಂಥ ಚಿತ್ರಗಳಲ್ಲಿ ಸಾಹಸ ಮೊದಲ ಸ್ಥಾನ ಪಡೆಯುತ್ತದೆ. ಒತ್ತೆಯಾಳುಗಳನ್ನು ಬಿಡಿಸುವ ನಿಟ್ಟಿನಲ್ಲಿ ಸಾಕಷ್ಟು ಹೋರಾಟಗಳು ನಡೆಯುತ್ತವೆ. ಇಲ್ಲಿ ಕಮಾಂಡೋಗಳು ಇದ್ದಾರಾದರೂ, ಹಾರಾಟ ಮತ್ತು ಹೋರಾಟ ಕಡಿಮೆಯೇ. ಮಂಸೋರೆ ಇಲ್ಲಿ ಭಾವನೆಗಳಿಗೆ, ಮಾತುಗಳಿಗೆ, ವಿಚಾರಗಳಿಗೆ, ತರ್ಕಕ್ಕೆ ಹೆಚ್ಚು ಒತ್ತುಕೊಟ್ಟಿದ್ದಾರೆ. ಹಾಗಾಗಿ ಇದೊಂದು ಭಾವನಾತ್ಮಕ ಥ್ರಿಲ್ಲರ್ ಎಂದು ಹೇಳಬಹುದು. ಇದರ ಮಧ್ಯೆ ವ್ಯಂಗ್ಯ, ಸಿಟ್ಟು, ವಿಡಂಬನೆ, ಹತಾಶೆ, ನೋವು, ದುರಾಸೆ, ಭಯ, ಅಸಹಾಯಕತೆ ಎಲ್ಲವೂ ಇದೆ. ಇವೆಲ್ಲವನ್ನೂ ಹದವಾಗಿ ಮತ್ತು ಬಹಳ ಚೆನ್ನಾಗಿ ಕಟ್ಟಿಕೊಟ್ಟಿ ದ್ದಾರೆ ಮಂಸೋರೆ. ಇದು ಒಬ್ಬ ಗೀತಾಳ ಕಥೆಯಷ್ಟೇ ಅಲ್ಲ, ಸರ್ಕಾರಿ ಕಚೇರಿಯಲ್ಲಿನ ಭ್ರಷ್ಟ ವ್ಯವಸ್ಥೆಗೆ ಬಲಿಪಶುಗಳಾದ ಎಲ್ಲರೂ ಈ ಚಿತ್ರದಲ್ಲಿ ತಮ್ಮನ್ನು ಕಂಡುಕೊಳ್ಳುತ್ತಾರೆ. ಇಲ್ಲಿ ಹೆಸರಾಂತ ಕಲಾವಿದರಿದ್ದಾರಾದರೂ, ಇಂಥದ್ದೊಂದು ಕಥೆಗೆ ಎಷ್ಟು ಸಹಜವಾಗಿರಬೇಕೋ, ಅಷ್ಟು ಸಹಜವಾಗಿ ಅಭಿನಯಿಸಿದ್ದಾರೆ. ಯಜ್ಞಾ ಶೆಟ್ಟಿ ಮೌನ ಮತ್ತು ನೋವಿನಲ್ಲೇ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಬಿ. ಸುರೇಶ ಮೂಕಪ್ರೇಕ್ಷಕರಾಗಿಯೇ ಉಳಿದು ಬಿಡುತ್ತಾರೆ. ಉಳಿದಂತೆ ಶ್ರುತಿ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಸಂಚಾರಿ ವಿಜಯ್, ದತ್ತಣ್ಣ, ಅವಿನಾಶ್, ರಾಘು ಶಿವಮೊಗ್ಗ, ಕೃಷ್ಣ ಹೆಬ್ಬಾಳೆ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಚಿತ್ರವನ್ನು ಇನ್ನಷ್ಟು ತಲ್ಲೀನಗೊಳಿಸುವುದು ಟಿ.ಕೆ. ದಯಾನಂದ್ ಅವರ ಚಿತ್ರಕಥೆ ಮತ್ತು ಮಾತುಗಳು. ಚಿತ್ರ ನೋಡಿಸಿಕೊಂಡು ಹೋಗುವುದರಿಂದ ಸಣ್ಣಪುಟ್ಟ ತಪು್ಪಗಳು ಯಾವುದೂ ಗಮನಕ್ಕೆ ಬರುವುದಿಲ್ಲ. ಅಷ್ಟೇ ಅಲ್ಲ, ವಿಷಯ ಮತ್ತು ಚಿತ್ರಕಥೆ ಬಿಟ್ಟರೆ ತಾಂತ್ರಿಕ ಅಂಶಗಳು ಸಹ ಗೌಣವಾಗಿ ಬಿಡುತ್ತವೆ. ಈ ನಿಟ್ಟಿನಲ್ಲಿ ದಯಾನಂದ್ ಅವರ ಗೆಲುವು ಇಲ್ಲಿ ಹೆಚ್ಚಿದೆ.