

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಆರೋಪದಲ್ಲಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ ನಟ ದರ್ಶನ್ ಇದೀಗ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ವಜಾಗೊಂಡ ಹಿನ್ನೆಲೆಯಲ್ಲಿ ಮತ್ತೆ ಜೈಲು ಪಾಲಾಗಿದ್ದಾರೆ. ಸದ್ಯ ಅವರ ನಟನೆಯ ‘ದ ಡೆವಿಲ್’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಇದೀಗ ನಟನ ಅನುಪಸ್ಥಿತಿಯ ಮಧ್ಯೆಯೇ ‘ದ ಡೆವಿಲ್’ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದ್ದು, ಇದೇ ಡಿಸೆಂಬರ್ 12ರಂದು ಸಿನಿಮಾ ತೆರೆ ಮೇಲೆ ಬರಲಿದೆ. ‘ಕಾಟೇರ’ ತೆರೆಕಂಡು ಬರೋಬ್ಬರಿ ಎರಡು ವರ್ಷಗಳ ಬಳಿಕ ದರ್ಶನ್ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಅಭಿಮಾನಿಗಳ ಪಾಲಿಗೆ ಈ ಸಿನಿಮಾ ಬಹುನಿರೀಕ್ಷಿತವಾಗಲಿದೆ. ಇನ್ನು, ಪ್ರಕಾಶ್ ವೀರ್ ನಿರ್ದೇಶನದ ‘ದ ಡೆವಿಲ್’ ಕಳೆದ ವರ್ಷ ಸೆಟ್ಟೇರಿತ್ತು. ಅಂದುಕೊಂಡಂತಾಗಿದ್ದರೆ ಇಷ್ಟೊತ್ತಿಗೆ ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಈ ನಡುವೆ ದರ್ಶನ್ ಜೈಲು ಪಾಲಾದ ಕಾರಣ, ಶೂಟಿಂಗ್ ಅರ್ಧಕ್ಕೆ ನಿಂತಿತ್ತು. ಬಳಿಕ ನಟ ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದು, ಕೆಲ ದಿನಗಳ ಕಾಲಗಳ ವಿಶ್ರಾಂತಿ ಪಡೆದು ಬಳಿಕ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಮೈಸೂರು, ರಾಜಸ್ಥಾನ ಹಾಗೂ ವಿದೇಶದಲ್ಲಿ ಶೂಟಿಂಗ್ ನಡೆಸಿ ಸಿನಿಮಾದ ಎಲ್ಲ ಕೆಲಸಗಳನ್ನು ಮುಗಿಸಿಕೊಟ್ಟಿದ್ದರು. ಸದ್ಯ ಚಿತ್ರದ ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗಿವೆ. ಇನ್ನು ಇಲ್ಲಿ ದರ್ಶನ್‌ಗೆ ರಚನಾ ರೈ ಜೋಡಿಯಾಗಿದ್ದಾರೆ. ಶರ್ಮಿಳಾ ಮಾಂಡ್ರೆ, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್ ಕಲಾ ಬಳಗದಲ್ಲಿದ್ದಾರೆ.
‘ಇದ್ರೇ ನೆಮ್ದಿಯಾಗ್ ಇರ್ಬೇಕು’ ಸಾಂಗ್ ರಿಲೀಸ್:
ಇನ್ನು ‘ದ ಡೆವಿಲ್’ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮುನ್ನ ಕೆಲ ತಾಸುಗಳ ಹಿಂದೆಯೇ ಚಿತ್ರದ ಮೊದಲ ಸಾಂಗ್ ‘ಇದ್ರೇ ನೆಮ್ದಿಯಾಗ್ ಇರ್ಬೇಕು’ ರಿಲೀಸ್ ಮಾಡಲಾಗಿದೆ. ಈ ಸಾಂಗ್ ಆಗಸ್ಟ್ 14ರಂದು ರಿಲೀಸ್ ಮಾಡಲು ನಿಗದಿಯಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ದಿನಾಂಕ ಮುಂದೂಡಲಾಗಿತ್ತು. ಇನ್ನು ಅನಿರುದ್ಧ ಶಾಸಿ ರಚಿಸಿರುವ ‘ಇದ್ರೇ ನೆಮ್ದಿಯಾಗ್ ಇರ್ಬೇಕು’ ಹಾಡಿಗೆ ದೀಪಕ್ ಬ್ಲೂ ಧ್ವನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಸಂತು ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಹಾಡಿನಲ್ಲಿ ದರ್ಶನ್ ಕುಣಿದು ಕುಪ್ಪಳಿಸಿದ್ದಾರೆ. ದರ್ಶನ್ ಹೆಚ್ಚು ಬಳಕೆ ಮಾಡುವ ಪದಗಳು ಹಾಗೂ ‘ಸೆಲೆಬ್ರಿಟಿ’ಗಳು ಅಭಿಮಾನವನ್ನು ಈ ಹಾಡಿನಲ್ಲಿ ವರ್ಣಿಸಿರುವುದು ವಿಶೇಷ. ರಿಲೀಸ್ ಆದ ಮೊದಲ ದಿನಕ್ಕೆ ಈ ಹಾಡು 50 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡು ದಾಖಲೆ ನಿರ್ಮಿಸಿದೆ.