

ಬೆಂಗಳೂರು: ‘ಪಾಪ್ಕಾರ್ನ್ ಮಂಕಿ ಟೈಗರ್’ ಬಿಡುಗಡೆಯ ಹೊಸ್ತಿಲಲ್ಲಿರುವಾಗ ಡಾಲಿ ಧನಂಜಯ ಅವರಿಗೆ ಬಂಪರ್ ಆಫರ್ ಬಂದಿದ್ದು, ಬೆಂಗಳೂರಿನ ಮಾಜಿ ಭೂಗತ ದೊರೆ ಜಯರಾಜ್ರ ಬಯೋಪಿಕ್ನಲ್ಲಿ ನಟಿಸುವ ಅವಕಾಶ ಸಿಕ್ಕಿದೆ.
ಅಗ್ನಿ ಶ್ರೀಧರ್ ಕಥೆ ಇರುವ ಈ ಚಿತ್ರವನ್ನು ‘ಅಳಿದು ಉಳಿದವರು’ ಚಿತ್ರದ ನಾಯಕ, ನಿರ್ಮಾಪಕ ಅಶು ಬೆದ್ರ ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷ ಎಂದರೆ ಈ ಚಿತ್ರ ಐದು ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ‘ಅವನೇ ಶ್ರೀಮನ್ನಾರಾಯಣ’, ‘ಅಳಿದು ಉಳಿದವರು’ ಸಿನಿಮಾಗಳಿಗೆ ಕೆಲಸ ಮಾಡಿರುವ ಶೂನ್ಯ ಎಂಬ ಹೊಸ ಪ್ರತಿಭೆ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.
‘ಒಬ್ಬ ನಟನನ್ನು ಒಳ್ಳೊಳ್ಳೆಯ ಪಾತ್ರಗಳು ಹುಡುಕಿಕೊಂಡು ಬರುತ್ತಿದ್ದರೆ ಅದಕ್ಕಿಂತ ಖುಷಿ ಬೇರೆ ಇಲ್ಲ. ಈ ಚಿತ್ರದಲ್ಲಿ ನೀವು ನಟಿಸಬೇಕು, ಅದು ಜಯರಾಜ್ ಪಾತ್ರ ಎಂದಾಗ ಬಹಳ ಖುಷಿಯಿಂದ ಒಪ್ಪಿಕೊಂಡಿದ್ದೇನೆ. ನಾನು ಅಗ್ನಿ ಶ್ರೀಧರ್ ಅವರ ಬರವಣಿಗೆಗೆ ದೊಡ್ಡ ಫ್ಯಾನ್. ‘ಎದೆಗಾರಿಕೆ’ ಚಿತ್ರ ಅನೌನ್ಸ್ ಆದಾಗ ನನಗೆ ಆ ಪಾತ್ರ ಸಿಗಲಿಲ್ಲವಲ್ಲ ಎಂದು ಹೊಟ್ಟೆ ಉರಿದುಕೊಂಡಿದ್ದೆ. ಈಗ ಅವರ ಕಥೆಯ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಜಯರಾಜ್ ಪಾತ್ರಕ್ಕಾಗಿ ಸದ್ಯದಲ್ಲೇ ತಯಾರಿ ಆರಂಭಿಸಲಿದ್ದೇನೆ’ ಎನ್ನುತ್ತಾರೆ ಧನಂಜಯ.
ಈ ಸಿನಿಮಾದಲ್ಲಿ 1974ರಿಂದ 77ರವರೆಗಿನ ಬೆಂಗಳೂರನ್ನು ತೋರಿಸಲಾಗುತ್ತದಂತೆ. ‘ರೆಟ್ರೋ ಬ್ಯಾಕ್ಡ್ರಾಪ್ನಲ್ಲಿ ನಟಿಸುವುದು ನನಗೆ ಮೊದಲಿನಿಂದಲೂ ಕನಸಾಗಿತ್ತು. ಅದು ಈ ಪಾತ್ರದ ಮೂಲಕ ನನಸಾಗುತ್ತಿದೆ. ಅಶು ಬೆದ್ರ, ಶೂನ್ಯ ಸೇರಿ ಎಲ್ಲರೂ ಸಿನಿಮಾ ಬಗ್ಗೆ ತುಂಬಾ ಪ್ಯಾಷನ್ ಇಟ್ಟುಕೊಂಡವರು. ಖಂಡಿತ ಇದು ಬೇರೆಯದ್ದೇ ಮಾದರಿಯ ಚಿತ್ರವಾಗುತ್ತದೆ’ ಎಂದು ಧನಂಜಯ ಸಂತಸ ವ್ಯಕ್ತಪಡಿಸಿದರು.
‘ಈ ಚಿತ್ರ ಮಾಡಬೇಕು ಎಂದು ತೀರ್ಮಾಸಿದಾಗ, ನಮ್ಮ ಬಚ್ಚನ್ ಅವರ ಪುತ್ರ ರೋಷನ್ ಧನಂಜಯ ಅವರ ಹೆಸರನ್ನು ಸೂಚಿಸಿದ. ನಾನು ಅವರ ‘ಅಲ್ಲಮ’ ಚಿತ್ರ ನೋಡಿ ಖುಷಿ ಪಟ್ಟಿದ್ದೆ. ಆತ ಒಬ್ಬ ಅದ್ಭುತ ನಟ ಎಂಬುದು ನನಗೆ ಅದರಲ್ಲೇ ಗೊತ್ತಾಗಿತ್ತು. ಹಾಗಾಗಿ ಜಯರಾಜ್ ಪಾತ್ರಕ್ಕೆ ಅವರನ್ನೇ ಆಯ್ಕೆ ಮಾಡಿದ್ದೇವೆ. ಈ ಪಾತ್ರವನ್ನು ಅವರು ಆವಾಹಿಸಿಕೊಳ್ಳಲಿದ್ದಾರೆ ಎಂಬ ನಂಬಿಕೆ ನನಗಿದೆ’ ಎಂದು ಅಗ್ನಿ ಶ್ರೀಧರ್ ತಿಳಿಸಿದರು.
ಈ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಅಗ್ನಿ ಶ್ರೀಧರ್ ಅವರ ಸಹೋದರನ ಪುತ್ರ ಅಭಿ ಇರಲಿದ್ದಾರೆ. ಸದ್ಯ ಧನಂಜಯ 2 ಚಿತ್ರಗಳಲ್ಲಿ ಬಿಜಿ ಇದ್ದು, ಅದು ಮುಗಿದ ತಕ್ಷಣ ಈ ಚಿತ್ರದ ಕೆಲಸಗಳು ಆರಂಭವಾಗಲಿವೆ. ಚಿತ್ರತಂಡ ಶೀಘ್ರದಲ್ಲೇ ಟೈಟಲ್ ಘೋಷಣೆ ಮಾಡಲಿದೆ.
ಜಯರಾಜ್ ಅವರ ಬಗ್ಗೆ ಬಹಳ ಕೇಳಿದ್ದೆ, ಓದಿದ್ದೆ. ಈಗ ಆ ಪಾತ್ರವೇ ನಾನಾಗಿದ್ದೇನೆ. ಜಯರಾಜ್ ಅವರನ್ನು ಮೈ ಮೇಲೆ ಆವಾಹಿಸಿಕೊಂಡು ನಟಿಸುತ್ತೇನೆ. ಧನಂಜಯ, ನಟ