thayavva film review: ಹೆಣ್ಣಿನ ಶೋಷಣೆ ವಿರುದ್ಧ ‘ತಾಯವ್ವ’ ಧ್ವನಿ

thayavva
Published on

ಬೆಂಗಳೂರು : ‘ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು?- ಕವಿಯತ್ರಿ ಸಂಚಿ ಹೊನ್ನಮ್ಮ ಅವರ ಪದ್ಯದ ಸಾಲುಗಳು ಪದೇ ಪದೇ ನೆನಪಾಗುತ್ತವೆ, ಸಾತ್ವಿಕ್ ಪವನ್ ನಿರ್ದೇಶನದ ‘ತಾಯವ್ವ’ ಚಿತ್ರ ನೋಡಿದಾಗ. ಅನಾದಿ ಕಾಲದಿಂದಲೂ ಹೆಣ್ಣಿನ ಶೋಷಣೆ ನಡೆದಿದೆ. ಕಾಲ-ಕಾಲಕ್ಕೆ ಶೋಷಣೆಯ ರೀತಿ ಬದಲಾವಣೆಯಾಗಿದೆ ಅಷ್ಟೇ. ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ, ವರದಕ್ಷಿಣೆ ಕಿರುಕುಳ.. ಹೀಗೆ ಹಲವು ರೀತಿಯಲ್ಲಿ ಹೆಣ್ಣಿನ ಶೋಷಣೆ ಮಾಡುವ ವರದಿಗಳು, ಸುದ್ದಿಗಳನ್ನು ಕೇಳಿರುತ್ತೇವೆ. ಈ ಎಲ್ಲ ಸಮಸ್ಯೆಗಳ ಸುತ್ತ ‘ತಾಯವ್ವ’ ಒಂದು ಸುತ್ತು ಹಾಕುತ್ತಾಳೆ. ಅಂತಿಮವಾಗಿ ಹೆಣ್ಣಿನ ಸುತ್ತ ಇರುವ ಎಲ್ಲ ತಪ್ಪು ಕಲ್ಪನೆಗಳನ್ನು ಹೊಡೆದೋಡಿಸುವುದರ ಜತೆಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಈ ಕಾರಣಕ್ಕಾಗಿ ಈ ಚಿತ್ರ ಗಮನಸೆಳೆಯುತ್ತದೆ.

ನಿರ್ದೇಶಕ ಸಾತ್ವಿಕ್ ಪವನ್ ಸಾಮಾಜಿಕ ವಿಷಯಗಳನ್ನು ಚಿತ್ರದಲ್ಲಿ ಅಚ್ಚುಕಟ್ಟಾಗಿ ಜೋಡಿಸಿದ್ದಾರೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹೆಣ್ಣು ಎದುರಿಸುವ ಸವಾಲಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಇನ್ನೊಂದಿಷ್ಟು ಅಧ್ಯಯನ ಹಾಗೂ ದೃಶ್ಯ ರೂಪ ಕೊಟ್ಟಿದ್ದರೆ, ಸಿನಿಮಾ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬರುತ್ತಿತ್ತು ಎನಿಸುತ್ತದೆ. ಕೆಲವು ಭಾವನಾತ್ಮಕ ದೃಶ್ಯಗಳು ಕೃತಕ ಎನಿಸಿಬಿಡುತ್ತದೆ. ಸಿನಿಮಾದಲ್ಲಿ ಜಾನಪದ ಹಾಡುಗಳನ್ನು ಬಳಸಿಕೊಳ್ಳಲಾಗಿದ್ದು, ಸುಶ್ರಾವ್ಯ ಸಂಗೀತದೊಂದಿಗೆ ಚೆನ್ನಾಗಿ ಮೂಡಿಬಂದಿವೆ. ಇವೇ ಚಿತ್ರದ ಹೈಲೈಟ್. ಸಾತ್ವಿಕ್ ಪವನ್ ಕ್ಯಾಮರಾದಲ್ಲಿ ಹಳ್ಳಿಯ ಸೊಗಡನ್ನು ಚೆನ್ನಾಗಿ ತೋರಿಸಿದ್ದಾರೆ. ಇಡೀ ಕಥೆಯನ್ನು ‘ತಾಯವ್ವ’ ಪಾತ್ರಧಾರಿ ಗೀತಾ ಪ್ರಿಯ ಅವರೇ ಆವರಿಸಿದ್ದು, ಗಮನಸೆಳೆಯುತ್ತಾರೆ. ಕೆಲವು ದೃಶ್ಯಗಳಿಗೆ ತಯಾರಿ ಬೇಕಿತ್ತು ಎನಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net