

ಬೆಂಗಳೂರು: ರವಿಚಂದ್ರನ್ ಅಭಿನಯದ ‘ದ ಜಡ್ಜ್‌ಮೆಂಟ್’ ರಿಲೀಸ್ ಆಗಿ ಒಂದು ವರ್ಷ ಕಳೆದಿದೆ. ಆ ಬಳಿಕ ನಟನ ಯಾವುದೇ ಸಿನಿಮಾಗಳು ತೆರೆಕಂಡಿಲ್ಲ. ಇದೀಗ ಅವರು ನಟಿಸಿರುವ ‘ತಪಸ್ಸಿ’ ಮತ್ತು ‘ಜೂನಿಯರ್’ ಎರಡು ಚಿತ್ರಗಳು ಇದೇ ತಿಂಗಳು ಬ್ಯಾಕ್ ಟು ಬ್ಯಾಕ್ ತೆರೆಗೆ ಬರಲು ರೆಡಿಯಾಗಿವೆ. ಆ ಮೂಲಕ ಅವರು ಡಬಲ್ ಖುಷಿಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ‘ತಪಸ್ಸಿ’ ಮಹಿಳಾ ಪ್ರಧಾನ ಚಿತ್ರವಾಗಿದ್ದು, ನಾಳೆ (ಜುಲೈ 3) ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಬೆಂಗಳೂರು ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸ್ಪೆನ್ಸರ್ ಮ್ಯಾಥ್ಯೂ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಛಾಯಾಗ್ರಹಣದ ಜತೆಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಮಹಿಳಾ ಪ್ರಧಾನ ಚಿತ್ರದಲ್ಲಿ ರವಿಚಂದ್ರನ್ ಜತೆ ಅಮೈರಾ ಗೋಸ್ವಾಮಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಜತೆಗೆ ವಿನಯ ಪ್ರಸಾದ್, ಭಾಸ್ಕರ್, ಅನುಷಾ ಕಿಣಿ, ರಥರ್ವ್, ಸಚಿನ್, ಗುಬ್ಬಿ ನಟರಾಜ್ ಕಲಾ ಬಳಗದಲ್ಲಿದ್ದಾರೆ. ಆರವ್ ರಾಶಿಕ್ ಹಿನ್ನೆಲೆ ಸಂಗೀತ, ಅರುಣ್ ಪಿ. ಥಾಮಸ್ ಸಂಕಲನ ಚಿತ್ರಕ್ಕಿದೆ. ಇದು ಬೆಂಗಳೂರಿನ ರೂಪದರ್ಶಿಯೊಬ್ಬರ ಬದುಕಿನಿಂದ ಸ್ಫೂರ್ತಿ ಪಡೆದ ನೈಜ ಘಟನೆಯಾಧಾರಿತ ಚಿತ್ರವಾಗಿದ್ದು ಕುತೂಹಲ ಮೂಡಿಸುವಂತಿದೆ.
ಕನ್ನಡಕ್ಕೆ ಬಂದ ಅಮೈರಾ: ಉತ್ತರ ಭಾರತದ ಮೂಲದ ನಟಿ ಅಮೈರಾ ಗೋಸ್ವಾಮಿಗೆ ‘ತಪಸ್ಸಿ’ ಕನ್ನಡದಲ್ಲಿ ಮೊದಲ ಚಿತ್ರ. ಈ ಮೂಲಕ ಸ್ಯಾಂಡಲ್‌ವುಡ್‌ಗೆ ಅವರು ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಈ ಹಿಂದೆ ಮರಾಠಿಯ ‘ಆಲ್ ಈಸ್ ವೆಲ್’ ಹಾಗೂ ಮಲಯಾಳಂನ ‘ಅಪೂರ್ವ ಪುತ್ರನ್ಮರ್’ ಚಿತ್ರಗಳಲ್ಲಿ ಅಮೈರಾ ನಟಿಸಿದ್ದರು. ಇದೀಗ ಕನ್ನಡದ ‘ತಪಸ್ಸಿ’ ಚಿತ್ರದಲ್ಲಿ ರೂಪದರ್ಶಿ ಪಾತ್ರದಲ್ಲಿ ನಟಿಸಿದ್ದು, ಟ್ರೇಲರ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.