

ಕನ್ನಡದಲ್ಲಿ ಮೊದಲು ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ ವಸಿಷ್ಠ ಸಿಂಹ ಕಂಚಿನ ಕಂಠ ಹಾಗೂ ಖಡಕ್ ಅಭಿನಯದಿಂದಲೇ ಚಿರಪರಿಚಿತರಾದವರು. ವಿಲನ್ ಪಾತ್ರದ ಜತೆ ಜತೆಗೆ ಕನ್ನಡದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’, ‘ಲವ್ ಲಿ’ ಸೇರಿ ಕೆಲ ಸಿನಿಮಾಗಳಲ್ಲಿ ಹೀರೋ ಆಗಿಯೂ ಮಿಂಚಿದ್ದಾರೆ. ಇದೀಗ ಅವರು ಪರಭಾಷೆ ಸಿನಿಮಾಗಳಲ್ಲೂ ಸೈ ಎನಿಸಿಕೊಳ್ಳುತ್ತಿದ್ದಾರೆ. 2015ರಲ್ಲಿ ತಮಿಳಿನ ‘ಅಲೋನ್’ ಮೂಲಕ ಮೊದಲ ಬಾರಿಗೆ ಪರಭಾಷೆಯಲ್ಲಿ ನಟಿಸಿದ್ದ ವಸಿಷ್ಠ ಬಳಿಕ ತೆಲುಗಿನ ‘ನಾರಪ್ಪ’, ‘ಒಡೆಲಾ: ರೈಲ್ವೇ ಸ್ಟೇಷನ್’, ‘ಡೆವಿಲ್: ದ ಬ್ರಿಟಿಷ್ ಏಜೆಂಟ್’ ಹಾಗೂ ಕಳೆದ ವರ್ಷ ತೆರೆಕಂಡಿದ್ದ ‘ಸಿಂಬಾ’ ಸಿನಿಮಾಗಳಲ್ಲಿ ನಟಿಸಿದ್ದರು. ಇಂತಹ ವಸಿಷ್ಠ ಸದ್ಯ ‘ಒಡೆಲಾ-2’ ಚಿತ್ರದಲ್ಲಿ ಅಭಿನಯಿಸಿದ್ದು, ಅದು ಇದೇ ತಿಂಗಳ 17ರಂದು ಬಿಡುಗಡೆಯಾಗುತ್ತಿದೆ. ಅಶೋಕ್ ತೇಜಾ ನಿರ್ದೇಶನದ ಈ ಚಿತ್ರವು ‘ಒಡೆಲಾ: ರೈಲ್ವೇ ಸ್ಟೇಷನ್’ ಸೀಕ್ವೆಲ್ ಆಗಿದ್ದು, ಬಹುಭಾಷಾ ನಟಿ ತಮನ್ನಾ ಭಾಟಿಯಾ ಮುಖ್ಯಭೂಮಿಕೆಯಲ್ಲಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ವಸಿಷ್ಠ ನಟನೆ ಹಾಗೂ ಕಂಚಿನ ಕಂಠವನ್ನು ತಮನ್ನಾ ಹಾಡಿ ಹೊಗಳಿದ್ದು, ‘ಮೊದಲ ಬಾರಿಗೆ ವಸಿಷ್ಠ ಸಿಂಹ ಜತೆ ನಟಿಸಿದ್ದೇನೆ. ಅವರೊಬ್ಬ ಪವರ್‌ುಲ್ ನಟ. ಹಾಗೆಯೇ ನಾನು ಹಲವಾರು ನಟರ ಜತೆ ಕೆಲಸ ಮಾಡಿದ್ದೇನೆ. ಆದರೆ, ಇವರು ಅದ್ಭುತ ನಟ. ಅವರ ಅಭಿನಯ ಮನಸ್ಸಿನಲ್ಲಿ ಅಚ್ಚಳಿಯಾಗಿ ಉಳಿಯುತ್ತದೆ. ಅವರಿಗೆ ದೊಡ್ಡ ಭವಿಷ್ಯವಿದೆ’ ಎಂದಿದ್ದಾರೆ. ಅದಕ್ಕೆ ಪ್ರತಿಯಾಗಿ ವಸಿಷ್ಠ ಸಿಂಹ, ತಮನ್ನಾಗಿ ಧನ್ಯವಾದ ತಿಳಿಸಿ, ‘ಹೀರೋಯಿನ್ ಆಗಿ ದೊಡ್ಡ ಸಕ್ಸಸ್ ಕಂಡಿದ್ದರು ಕೂಡ ತಮನ್ನಾ ಅವರು ಮೊದಲ ಸಿನಿಮಾ ಎಂಬಂತೆ ಸೆಟ್‌ಗೆ ಬರುತ್ತಿದ್ದರು. ನಿಮ್ಮ ಈ ಸಮರ್ಪಣಾ ಭಾವಕ್ಕೆ ಧನ್ಯವಾದಗಳು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. -ಏಜೆನ್ಸೀಸ್