

ಟಾಲಿವುಡ್ ನಟಿ ತಮನ್ನಾ ಭಾಟಿಯಾ, ಇತ್ತೀಚಿನ ಕೆಲ ದಿನಗಳಲ್ಲಿ ವೆಬ್ ಸಿರೀಸ್ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅದಕ್ಕೆ ಕಾರಣ ಸಿನಿಮಾಗಳ ಕೊರತೆ! ಸದ್ಯ ಅವರ ಕೈಯಲ್ಲಿರುವ ಸಿನಿಮಾ ಎಂದರೆ ಅದು ಕನ್ನಡಿಗ ನಾಗಶೇಖರ್ ನಿರ್ದೇಶನ ಮಾಡುತ್ತಿರುವ ‘ಗುರ್ತಂದಾ ಸೀತಾಕಲಂ’. ಆ ಸಿನಿಮಾ ಹೊರತುಪಡಿಸಿ ಬೇರಾವ ಚಿತ್ರಕ್ಕೆ ಸಹಿ ಮಾಡಿರುವ ಬಗ್ಗೆ ಸುದ್ದಿಯಾಗಿಲ್ಲ. ಹೀಗಿರುವಾಗಲೇ ವೆಬ್ ಸೀರಿಸ್ ನತ್ತ ಗಮನಹರಿಸಿದ್ದಾರೆ.
ಆಹಾ ಒಟಿಟಿಯಲ್ಲಿ ‘ಲೆವೆಂಥ್ ಅವರ್’ ಮತ್ತು ಡಿಸ್ನಿ ಹಾಟ್ಸ್ಟಾರ್ ಪ್ಲಸ್ನಲ್ಲಿ ‘ನವೆಂಬರ್ ಸ್ಟೋರಿ’ ಎಂಬ ಎರಡು ವೆಬ್ ಸರಣಿಗಳು ಪ್ರಸಾರವಾಗಿದ್ದವು. ಅವೆರಡರಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದ ತಮನ್ನಾ, ಇದೀಗ ಅದರ ಬೆನ್ನಲ್ಲೇ ಅಮೆಜಾನ್ ಪ್ರೖೆಂಗಾಗಿ ಹೊಸ ವೆಬ್ ಸರಣಿಗೆ ಸಹಿ ಹಾಕಿದ್ದಾರೆ. ಹಲವು ಭಾಷೆಗಳಲ್ಲಿ ಡಬ್ ಆಗಿ ಸ್ಟ್ರೀಮ್ ಆಗಲಿರುವ ಈ ಸರಣಿಗೆ ಅರುಣಿಮಾ ಶರ್ಮಾ ನಿರ್ದೇಶನ ಮಾಡಲಿದ್ದಾರೆ. ಸೆಪ್ಟೆಂಬರ್ನಲ್ಲಿ ಶೂಟಿಂಗ್ ಪ್ಲಾನ್ ಆಗಿದ್ದು, ನಿರ್ದೇಶಕ ದಿನೇಶ್ ವಿಜನ್ ಇದರ ನಿರ್ವಣದ ಜವಾಬ್ದಾರಿ ಹೊತ್ತಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಶೈಲಿಯ ಸರಣಿಯಲ್ಲಿ ನೆಗೆಟಿವ್ ಲವರ್ ರೀತಿಯ ಪಾತ್ರವನ್ನು ತಮನ್ನಾ ನಿಭಾಯಿಸಲಿದ್ದಾರೆ. 2022ರಲ್ಲಿ ಅಮೆಜಾನ್ನಲ್ಲಿ ಬಿಡುಗಡೆ ಆಗಲಿದೆ.