

ಕನ್ನಡದಲ್ಲಿ ನಟಿ ರಾಗಿಣಿ ದ್ವಿವೇದಿ ನಟಿಸಿದ್ದ ‘ಟೆರರಿಸ್ಟ್’ ಚಿತ್ರ ಈಗಾಗಲೇ ಹಿಂದಿಗೆ ತನ್ನ ರಿಮೇಕ್ ಹಕ್ಕುಗಳನ್ನು ಮಾರಿಕೊಂಡಿದೆ. ಬಾಲಿವುಡ್ನಲ್ಲಿ ‘ಬ್ಲಾಂಕ್’, ‘ಒನ್ ನೈಟ್ ಸ್ಟಾ್ಯಂಡ್’, ‘ಬ್ಲೂ’, ‘ಬೆಹೆನ್ ಹೋಗಿ ತೇರಿ’ ಹೀಗೆ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ ‘ಎಚಲೊನ್ ಪ್ರೊಡಕ್ಷನ್’ ಸಂಸ್ಥೆ ಈ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡುತ್ತಿದೆ.
ಇದೆಲ್ಲದರ ನಡುವೆ ಬಾಲಿವುಡ್ನಲ್ಲಿ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ನಿರ್ದೇಶಕರೇ ಹೇಳುವಂತೆ ಕನ್ನಡದಲ್ಲಿ ರಾಗಿಣಿ ನಿಭಾಯಿಸಿದ್ದ ಪಾತ್ರಕ್ಕೆ ಬಾಲಿವುಡ್ನಲ್ಲಿ ಖ್ಯಾತ ನಟಿಯರಿಗೇ ಚಿತ್ರತಂಡ ಮಣೆಹಾಕಿದೆ. ಆ ಪೈಕಿ ನಟಿ ಸೋನಮ್ ಕಪೂರ್ ಗ್ರೀನ್ ಸಿಗ್ನಲ್ ಸಹ ಕೊಟ್ಟಿದ್ದಾರಂತೆ. ‘ವಿಶಾಲ್ ರಾಣಾ ಎಂಬುವವರು ನಮ್ಮ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡುತ್ತಿದ್ದಾರೆ. ಈಗಾಗಲೇ ಸೋನಮ್ ಕಪೂರ್ಗೆ ಸಿನಿಮಾ ತೋರಿಸಿದ್ದು, ಅವರಿಂದ ಒಪ್ಪಿಗೆ ಸಿಕ್ಕಿದೆ. ಆದರೆ, ನಿರ್ವಪಕರು ವಿದ್ಯಾ ಬಾಲನ್ ಅವರನ್ನೂ ಅಪ್ರೋಚ್ ಮಾಡಿದ್ದು, ಅವರ ಉತ್ತರ ಬಂದ ಬಳಿಕ ಯಾರು ನಟಿಸಲಿದ್ದಾರೆ ಎಂಬುದು ಗೊತ್ತಾಗಲಿದೆ’ ಎಂಬುದು ಪಿ. ಸಿ ಶೇಖರ್ ಮಾತು. ಈಗಾಗಲೇ ಹಿಂದಿಯಲ್ಲಿ ಸ್ಕ್ರಿಪ್ಟಿಂಗ್ ಕೆಲಸಗಳು ಶುರುವಾಗಿದ್ದು, ನಾಯಕಿ ಅಂತಿಮವಾಗುತ್ತಿದ್ದಂತೆ ಚಿತ್ರೀಕರಣಕ್ಕೂ ಸಿದ್ಧತೆ ಮಾಡಿಕೊಳ್ಳಲಿದೆ ತಂಡ. ವಿಶೇಷ ಏನೆಂದರೆ, ಕನ್ನಡದಲ್ಲಿ ನಿರ್ದೇಶನ ಮಾಡಿದ್ದ ಪಿ ಸಿ ಶೇಖರ್ ಈ ಚಿತ್ರದ ಮೂಲಕ ಬಾಲಿವುಡ್ಗೆ ಪ್ರವೇಶ ಪಡೆದರೂ ಅಚ್ಚರಿ ಇಲ್ಲ. ಏಕೆಂದರೆ, ಸ್ವತಃ ನಿರ್ವಪಕರೇ ಶೇಖರ್ಗೆ ಹಿಂದಿಯಲ್ಲಿ ನಿರ್ದೇಶನ ಮಾಡುವಂತೆ ಆಫರ್ ಕೊಟ್ಟಿದ್ದಾರೆ. ಆದರೆ, ಸದ್ಯಕ್ಕೆ ಅದಿನ್ನೂ ಅಧಿಕೃತವಾಗಿಲ್ಲ.