ಟಾಮ್ ಆ್ಯಂಡ್ ಜೆರ್ರಿಗೆ ಸಿದ್ ಕಂಠ; ಕನ್ನಡಕ್ಕೆ ಬಂದ ತೆಲುಗು ಗಾಯಕ

Ullasa Tom
Published on

ಬೆಂಗಳೂರು: ಶೀರ್ಷಿಕೆ ಮೂಲಕವೇ ಗಮನ ಸೆಳೆದ ‘ಟಾಮ್ ಆ್ಯಂಡ್ ಜೆರ್ರಿ’ ಸಿನಿಮಾ ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಲ್ಲಿದೆ. ತೆಲುಗಿನ ಖ್ಯಾತ ಗಾಯಕ ಸಿದ್ ಶ್ರೀರಾಮ್ ಅವರನ್ನು ಮೊದಲ ಬಾರಿ ಕನ್ನಡಕ್ಕೆ ತರೆತಂದು ಅವರಿಂದ ಮೆಲೋಡಿ ಟ್ರ್ಯಾಕ್​ಗೆ ಧ್ವನಿ ಪಡೆದುಕೊಂಡಿದ್ದಾರೆ ಸಂಗೀತ ನಿರ್ದೇಶಕ ಮ್ಯಾಥ್ಯೂಸ್ ಮನು. ನಿಶ್ಚಿತ್ ಕರೋಡಿ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಕಿರುತೆರೆ ಚೆಲುವೆ ಚೈತ್ರಾ ರಾವ್ ನಾಯಕಿಯಾಗಿ ನಟಿಸಿದ್ದಾರೆ.

‘ಕೆಜಿಎಫ್’ ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದ ರಾಘವ್ ವಿನಯ್ ಶಿವಗಂಗೆ ‘ಟಾಮ್ ಆ್ಯಂಡ್ ಜೆರ್ರಿ’ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಹುತೇಕ ಸಿನಿಮಾ ಕೆಲಸಗಳನ್ನು ಮುಗಿಸಿಕೊಂಡಿರುವ ಈ ಚಿತ್ರತಂಡ, ಇದೀಗ ‘ಹಾಯಾಗಿದೆ ಎದೆಯೊಳಗೆ..’ ಸಾಹಿತ್ಯದ ಮೆಲೋಡಿ ಹಾಡಿನ ಮೂಲಕ ಸದ್ದು ಮಾಡಲು ತಯಾರಿ ನಡೆಸಿದೆ. ‘ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಸಾಕಷ್ಟು ಹೆಸರು ಮಾಡಿರುವ ಗಾಯಕರೊಬ್ಬರು ನಮ್ಮ ಚಿತ್ರದ ಮೂಲಕ ಕನ್ನಡಕ್ಕೆ ಬಂದಿರುವುದು ಖುಷಿಯ ವಿಚಾರ. ಈಗಾಗಲೇ ಹಾಡಿನ ಶೂಟಿಂಗ್ ಮುಗಿದಿದೆ. ಚಿತ್ರದ ಡಬ್ಬಿಂಗ್ ಸಹ ಮುಗಿದಿದ್ದು, ಎಡಿಟಿಂಗ್ ಕೆಲಸ ನಡೆಯುತ್ತಿದೆ’ ಎಂಬುದು ಚಿತ್ರದ ನಾಯಕಿ ಚೈತ್ರಾ ಮಾತು. ರಿದ್ಧಿ ಸಿದ್ಧಿ ಬ್ಯಾನರ್ ಅಡಿಯಲ್ಲಿ ರಾಜು ಶೇರಿಗಾರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಸಿದ್ ಶ್ರೀ ರಾಮ್ಗೆ ಕನ್ನಡದಲ್ಲಿ ಹಾಡುವಂತಾ ಈತನಕ ಸಾಕಷ್ಟು ಆಫರ್ ಗಳು ಬಂದಿದ್ದವು. ಕನ್ನಡ ಭಾಷೆಗಾಗಿ ಹಾಡುವ ಮೊದಲ ಹಾಡು ಹೀಗೇ ಇರಬೇಕು ಎಂದು ಕಾದಿದ್ದ ಶ್ರೀರಾಮ್ ಕಡೆಗೂ ಟಾಮ್ ಅಂಡ್ ಜೆರ್ರಿ ಸಂಗೀತ ಮತ್ತು ಸಾಹಿತ್ಯಕ್ಕೆ ಮನಸೋತು ಹಾಡಲು ಒಪ್ಪಿ, ರೆಕಾರ್ಡಿಂಗ್ ಸಹಾ ಮುಗಿಸಿದ್ದಾರೆ. ಇಷ್ಟೇ ಅಲ್ಲದೆ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಲಿದೆ, ಸಿನಿಮಾ ಹಾಡುಗಳು ಅದ್ಭುತವಾಗಿ ಮೂಡಿ ಬಂದಿದ್ದು, ಕಂಪೋಸರ್ ಮ್ಯಾಥ್ಯೂಸ್ ಮನು ರವರನ್ನು ಮೆಲೋಡಿ ಕಿಲ್ಲರ್ ಎಂದು ಪ್ರಶಂಸಿಸಿ, ಚಿತ್ರ ತಂಡದ ಎಲ್ಲರಿಗೂ ಶುಭ ಕೋರಿದ್ದಾರೆ.

ಇನ್ನು ಈ ಸಿನಿಮಾಗೆ ಛಾಯಾಗ್ರಾಹಕರಾಗಿ ಸಂಕೇತ್ ಕಾರ್ಯ ನಿರ್ವಹಿಸಿದ್ದರೆ, ಚಿತ್ರಕ್ಕೆ ಸೂರಜ್ ಅಂಕೋಲೆಕರ್ ಅವರ ಸಂಕಲನವಿದೆ. ಸಾಹಸ ನಿರ್ದೇಶಕರಾಗಿ ಅರ್ಜುನ್ ರಾಜ್ ಕಾರ್ಯ ನಿರ್ವಹಿಸಿದ್ದರೆ, ನೃತ್ಯ ಸಂಯೋಜಕರಾಗಿ ರಾಜ್ ಕಿಶೋರ್ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಹಿರಿಯ ಕಲಾವಿದರಾದ ಜೈ ಜಗದೀಶ್, ತಾರಾ ಅನುರಾಧ, ರಾಕ್ಲೈನ್ ಸುಧಾಕರ್, ಪದ್ಮಜಾ ರಾವ್, ಕಡ್ಡಿಪುಡಿ ಚಂದ್ರು ಸೇರಿದಂತೆ ಕವಲು ದಾರಿ ಖ್ಯಾತಿಯ ಸಂಪತ್ ಮೈತ್ರೇಯ, ಕೆ ಜಿ ಎಫ್ ಖ್ಯಾತಿಯ ೨ ಶೇಖರ್ ಮತ್ತು ಮುಂತಾದ ಕಲಾವಿದರ ದಂಡೇ ಇದೆ. ನಿಶ್ಚಿತ್ ಕರೋಡಿ ಹಾಗೂ ಚೈತ್ರ ರಾವ್ ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ.

ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾದ ವಿನಯ್ ಚಂದ್ರ ಅವರ ಕೊಡುಗೆ ಅಪಾರ. ಚಿತ್ರದ ಪ್ರತಿ ಹಂತದಲ್ಲು ತಮ್ಮ ಅದ್ಭುತ ಕಾರ್ಯ ನಿರ್ವಹಣೆಯ ಮೂಲಕ ಸಿನಿಮಾ ಅಮೋಘವಾಗಿ ಮೂಡಿ ಬರಲು ನೆರವಾಗಿದ್ದಾರೆ. ಹೆಸರಾಂತ ಉದ್ಯಮಿಯಾದ ರಾಜು ಶೇರಿಗಾರ್ ಅವರು ಕನ್ನಡ ಅಭಿಮಾನ ಮತ್ತು ಕಲೆಯ ಮೇಲಿನ ವಿಶೇಷ ಒಲವು, ಕಾಳಜಿಯಿಂದ ನಿರ್ಮಿಸಿರುವ ಮೊದಲ ಚಿತ್ರ ಟಾಮ್ ಅಂಡ್ ಜೆರ್ರಿ. ಹಾಯಾಗಿದೆ ಎದೆಯೊಳಗೆ ಹಾಡಿಗೆ ಸಂಗೀತ ನಿರ್ದೇಶಕ ಮ್ಯಾಥ್ಯೂಸ್ ಮನು ರವರೇ ಸಾಹಿತ್ಯ ರಚಿಸಿದ್ದು, ಸಿದ್ ಶ್ರೀರಾಮ್ ಕಂಠ ಸಿರಿಯಲ್ಲಿ ಮೂಡಿ ಬಂದಿರುವ ಈ ಹಾಡು ಖಂಡಿತವಾಗಿಯೂ ದೊಡ್ಡ ಹಿಟ್ ಆಗುತ್ತದೆ ಎನ್ನುವುದು ಇಡೀ ಚಿತ್ರತಂಡದ ನಂಬಿಕೆ…

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net