

ಬೆಂಗಳೂರು: ಕೆಜಿಎಫ್ ಸಿನಿಮಾ ಬಿಡುಗಡೆ ಆಗಿ ಒಂದೂವರೆ ವರ್ಷವಾಯ್ತು. ಇಂದಿಗೂ ಆ ಚಿತ್ರದ ಕ್ರೇಜ್ ಕಮ್ಮಿ ಆಗಿಲ್ಲ, ಟಿವಿಯಲ್ಲಿ ಆಗಾಗ ಪ್ರಸಾರವಾಗಿ ಸದ್ದು ಮಾಡುತ್ತಿರುತ್ತದೆ, ಹೀಗಿರುವಾಗಲೇ ಇದೇ ಕೆಜಿಎಫ್ ತಂಡದ ಮುಂದೆ ಪಕ್ಕದ ತೆಲುಗು ಅಭಿಮಾನಿಗಳು ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಆ ಬೇಡಿಕೆಯನ್ನು ಈಡೇರಿಸುವುದಾಗಿಯೂ ಟೀಮ್ ಹೇಳಿಕೊಂಡಿದೆ.
ಹಾಗಾದರೆ ಏನದು ಬೇಡಿಕೆ? ಹೌದು, ಕ್ವಾರಂಟೈನ್ ಹೊತ್ತಲ್ಲಿ ಕೆಜಿಎಫ್ ತೆಲುಗು ಅವತರಣಿಕೆಯನ್ನು ಕಿರುತೆರೆಯಲ್ಲಿ ಪ್ರಸಾರ ಮಾಡುವಂತೆ ತೆಲುಗು ಸಿನಿಪ್ರೇಮಿಗಳು ಟ್ವಿಟರ್ನಲ್ಲಿ ಕೋರಿಕೊಂಡಿದ್ದಾರೆ. ಕರೊನಾ ಹೊತ್ತಲ್ಲಿ ಕೆಜಿಎಫ್ ಒಳ್ಳೆಯ ಮನರಂಜನೆ ನೀಡಲಿದೆ ಎಂದಿದ್ದಾರೆ. ಅಭಿಮಾನಿಗಳ ಈ ಪ್ರಶ್ನೆಗೆ ಉತ್ತರಿಸಿರುವ ಕೆಜಿಎಫ್ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ಶೀಘ್ರದಲ್ಲಿ ತೆಲುಗು ಕಿರುತೆರೆಯಲ್ಲಿ ಕೆಜಿಎಫ್ ಸಿನಿಮಾ ಪ್ರಸಾರ ಆಗಲಿದೆ ಎಂದು ಭರವಸೆ ಕೊಟ್ಟಿದ್ದಾರೆ.