

ಬೆಂಗಳೂರು: ‘ಚುನಾವಣೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ನನಗೆ ಸಿನಿಮಾ ನಿರ್ಮಾಣ ದೊಡ್ಡ ವಿಷಯವಲ್ಲ. ಆದರೆ, ನನಗಿಷ್ಟವಿಲ್ಲದೆ ಕೆಲಸಕ್ಕೆ ನಾನು ಹಣ ಕೊಡುವುದಿಲ್ಲ. ಈ ಚಿತ್ರವನ್ನು ನಾನು ನಿರ್ವಿುಸುತ್ತಿಲ್ಲ ...’- ಹಾಗಂತ ಹೇಳಿದ್ದು ಗುಬ್ಬಿ ಶಾಸಕ ಶ್ರೀನಿವಾಸ್. ಅವರ ಮಗ ದುಶ್ಯಂತ್ ಇದೀಗ, ಸುನಿ ನಿರ್ದೇಶನದ ‘ಗತವೈಭವ’ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಎಂಎಲ್ಎ ಮಗನಾಗಿರುವುದರಿಂದ, ತಂದೆಯೇ ಚಿತ್ರಕ್ಕೆ ಹಣ ಹಾಕಿರಬಹುದು ಎಂಬ ಗುಮಾನಿ ಎಲ್ಲರಲ್ಲೂ ಇತ್ತು. ಆದರೆ, ಶ್ರೀನಿವಾಸ್ ತಮಗೂ, ಈ ಚಿತ್ರಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಸುನಿ ನಿರ್ದೇಶಿಸಿ, ದೀಪಕ್ ತಿಮ್ಮಪ್ಪ ಜತೆಗೆ ಜಂಟಿಯಾಗಿ ನಿರ್ವಿುಸುತ್ತಿರುವ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಈ ವೇಳೆ ಮಾತನಾಡಿದ ದುಶ್ಯಂತ್, ‘ಸಿನಿಮಾದಲ್ಲಿ ನಟಿಸುವುದು ಮನೆಯಲ್ಲಿ ಇಷ್ಟವಿರಲಿಲ್ಲ. ಆದರೆ, ಅಭಿನಯ ನನಗೆ ಬಹಳ ಇಷ್ಟ. ಅಭಿನಯಕ್ಕೆ ಬೇಕಾದ ತರಬೇತಿ ಪಡೆದೆ. ಸ್ನೇಹಿತರೊಬ್ಬರಿಂದ ಸುನಿ ಅವರ ಪರಿಚಯವಾಯಿತು’ ಎಂದರು. ‘ವಾಸ್ಕೋಡಿಗಾಮನ ಕಥೆ ಸೇರಿದಂತೆ ಕೆಲವು ಐತಿಹಾಸಿಕ ಸನ್ನಿವೇಶಗಳಿರುತ್ತವೆ. ಇದು ಭಾವನೆ ಮತ್ತು ಮೈಂಡ್ಗೇಮ್ ಮಿಶ್ರಣ ಎನ್ನಬಹುದು. ಏಪ್ರಿಲ್ ಕೊನೆಯಲ್ಲಿ ಚಿತ್ರೀಕರಣ ಆರಂಭವಾಗಲಿದೆ’ ಎನ್ನುತ್ತಾರೆ ನಿರ್ದೇಶಕ ಸುನಿ.