

ಬೆಂಗಳೂರು: ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ‘777 ಚಾರ್ಲಿ’ ಸಿನಿಮಾ ಶೂಟಿಂಗ್ನಲ್ಲಿ ಬಿಜಿಯಾಗಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿದ್ದು, ಕೊನೇ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೀಗ ಕೊಡೈಕೆನಲ್ನತ್ತ ಇಡೀ ತಂಡ ಪ್ರಯಾಣ ಬೆಳೆಸಿದೆ.
ಇತ್ತೀಚೆಗಷ್ಟೇ ರಿಚ್ಚಿ ಸಲುವಾಗಿ ಗೋವಾದ ಕಡಲ ತೀರಕ್ಕೆ ಹೋಗಿ ಬಂದಿದ್ದ ರಕ್ಷಿತ್, ಇದೀಗ ಚಾರ್ಲಿ ಸಲುವಾಗಿ ಕೊಡೈಕೆನಲ್ಗೆ ತೆರಳುತ್ತಿದ್ದಾರೆ. ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಶೂಟಿಂಗ್ ಮಾಡಿಕೊಂಡಿದ್ದ ತಂಡ, ಈಗ ಚಿತ್ರದ ಕೆಲ ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯಲು ಕೊಡೈಕೆನಲ್ನತ್ತ ಮುಖ ಮಾಡಿದೆ.
‘777 ಚಾರ್ಲಿ’ ಚಿತ್ರವನ್ನು ಕಿರಣ್ ರಾಜ್ ನಿದೇಶಿಸುತ್ತಿದ್ದಾರೆ. ಚಿತ್ರದಲ್ಲಿ ರಕ್ಷಿತ್, ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ, ದಾನಿಶ್ ಸೇಠ್ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರವನ್ನು ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಜತೆಯಾಗಿ ನಿರ್ಮಾಣ ಮಾಡುತ್ತಿದ್ದಾರೆ.