

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ತರುಣ್ ಸುಧೀರ್ ನಿರ್ದೇಶಿಸಿದ್ದ, ದರ್ಶನ್ ನಟಿಸಿದ್ದ "ಕಾಟೇರ' ಚಿತ್ರ ಕಳೆದ ಡಿ. 29ರಂದು ರಿಲೀಸ್ಆಗಿ ಬಾಕ್ಸಾಫಿಸಿನಲ್ಲಿ ಭರ್ಜರಿ ಗಳಿಕೆ ಮಾಡಿಕೊಂಡಿತ್ತು. ಆ ಬಳಿಕ ನಟ ದರ್ಶನ್ ಜತೆ ತರುಣ್ ಸುಧೀರ್ ಕಳೆದ ಫೆ. 16ರಂದು "ವೀರ ಸಿಂಧೂರ ಲಕ್ಷ್ಮಣ' ಬಯೋಪಿಕ್ ಘೋಷಿಸಿದ್ದರು. ಆದರೆ, ಆ ನಂತರ ನಡೆದ ಘಟನಾವಳಿಗಳಿಂದಾಗಿ ನಟ ದರ್ಶನ್ ಕೆಲ ತಿಂಗಳಿನಿಂದ ನಟನೆಯಿಂದ ದೂರವಾಗಿದ್ದಾರೆ. ಹೀಗಾಗಿ ನಿರ್ದೇಶಕ ತರುಣ್ ಸುಧೀರ್ ಇದೀಗ ನಿರ್ಮಾಣದತ್ತ ಗಮನ ಹರಿಸಿದ್ದು, ಗುರುವಾರ ಹೊಸ ಸಿನಿಮಾ ಘೋಷಿಸಿದ್ದಾರೆ. 2022ರಲ್ಲಿ ಜಡೇಶ್ ಹಂಪಿ ನಿರ್ದೇಶಿಸಿದ್ದ "ಗುರು ಶಿಷ್ಯರು' ನಿರ್ಮಿಸಿದ್ದ ತರುಣ್, ಈಗ "ಪ್ರೊಡಕ್ಷನ್ ನಂ. 2' ಅನೌನ್ಸ್ ಮಾಡಿದ್ದು, ಅವರ ಜತೆ ಅಟ್ಲಾಂಟಾ ನಾಗೇಂದ್ರ ಕೈ ಜೋಡಿಸಿದ್ದಾರೆ. ಪುನೀತ್ ಗುರುಸ್ವಾಮಿ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದು, ಕನ್ನಡದ ಜತೆ ತಮಿಳು, ತೆಲುಗು ಭಾಷೆಗಳಲ್ಲೂ ಈ ಸಿನಿಮಾ ಮೂಡಿಬರಲಿದೆ. ಚಿತ್ರದ ಬಗ್ಗೆ ತರುಣ್, ""ಕಾಟೇರ' ಚಿತ್ರದಲ್ಲಿ ಪುನೀತ್ ಸಹ&ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಆ ಸಮಯದಲ್ಲೇ ನನಗೆ ಈ ಕಥೆ ಹೇಳಿದ್ದರು. ಆಗಿನಿಂದಲೂ ಕಥೆಯ ಬಗ್ಗೆ ಚರ್ಚಿಸುತ್ತಿದ್ದೆವು. ಬೇರೆ ಭಾಷೆಗಳಲ್ಲೂ ಜನರಿಗೆ ರೀಚ್ ಆಗುವ ಗಟ್ಟಿತನವಿರುವ ಕಥೆ ಅಂತನ್ನಿಸಿತು. ಹೀಗಾಗಿ ಮೂರು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡಲಿದ್ದೇವೆ' ಎನ್ನುತ್ತಾರೆ.
ನೈಜ ಟನೆಯಾಧಾರಿತ ಚಿತ್ರ:
ಇದು ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾ ಆಗಿದ್ದು, "2000ರಲ್ಲಿ ಮಲೆಮಹದೇಶ್ವರದಲ್ಲಿ ನಡೆದ ಇಂಟೆನ್ಸ್ ಲವ್ಸ್ಟೋರಿ. ಬಹುತೇಕರಿಗೆ ಗೊತ್ತಿರುವ ನೈಜ ಟನೆಯಾದರೂ, ಅದರ ಹಿಂದೆ ನಡೆದ ಹಲವು ಥ್ರಿಲ್ಲಿಂಗ್ ಅಂಶಗಳು ಚಿತ್ರದಲ್ಲಿರಲಿವೆ. ಇದೇ ತಿಂಗಳ 25ರಿಂದ ಶೂಟಿಂಗ್ ಪ್ರಾರಂಭಿಸಲಿದ್ದೇವೆ. ಸದ್ಯಕ್ಕೆ ಶೀರ್ಷಿಕೆ ಅಂತಿಮವಾಗಿಲ್ಲ. ಹೀಗಾಗಿ ಸಂಕ್ರಾಂತಿಗೆ ಹಬ್ಬಕ್ಕೆ ಟೈಟಲ್ ಅನೌನ್ಸ್ ಮಾಡುವ ಪ್ಲ್ಯಾನ್ ಇದೆ. ಮುಂದಿನ ವರ್ಷದ ಮೊದರ್ಲಧದಲ್ಲೇ ಚಿತ್ರ ರಿಲೀಸ್ ಮಾಡಲು ಯೋಜಿಸಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ ತರುಣ್ ಸುಧೀರ್.
ಸಿಂಧೂರ ಲಕ್ಷ್ಮಣ ಬಯೋಪಿಕ್ ಯಾವಾಗ?
"ಕಾಟೇರ' ಯಶಸ್ಸಿನ ಬೆನ್ನಲ್ಲೇ ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್ನಲ್ಲಿ ಘೋಷಣೆಯಾಗಿದ್ದ "ವೀರ ಸಿಂಧೂರ ಲಕ್ಷ್ಮಣ' ಬಯೋಪಿಕ್ ಬಗ್ಗೆ ಕುತೂಹಲ, ನಿರೀಕ್ಷೆಗಳು ಹೆಚ್ಚಿದ್ದವು. ಆದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಸದ್ಯ ಅನಾರೋಗ್ಯದಿಂದಾಗಿ ಬೇಲ್ ಪಡೆದಿರುವ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದಾಗಿ ಪ್ರಕಾಶ್ ವೀರ್ ನಿರ್ದೇಶಿಸುತ್ತಿರುವ "ಡೆವಿಲ್' ಚಿತ್ರೀಕರಣ ಸ್ಥಗಿತಗೊಂಡಿದ್ದು, ಸಿಂಧೂರ ಲಕ್ಷ್ಮಣ ಕೂಡ ತಡವಾಗಿದೆ. ಈ ಬಗ್ಗೆ ತರುಣ್, "ಸಿಂಧೂರ ಲಕ್ಷ್ಮಣ ಕಥೆ ರೆಡಿಯಿದೆ. ಆದರೆ, ಸಿನಿಮಾ ಯಾವಾಗ ಪ್ರಾರಂಭಿಸಬೇಕು ಎಂಬುದರ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ' ಎನ್ನುತ್ತಾರೆ.