ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ನಿರ್ಮಿಸಿದ ತಾರಕ್!

Junior NTR Final
Published on

ಟಾಲಿವುಡ್‌ನ ಜನಪ್ರಿಯ ಹೀರೋ ತಾರಕ್ ಅಲಿಯಾಸ್ ಜ್ಯೂನಿಯರ್ ಎನ್‌ಟಿಆರ್ ಹೊಸ ದಾಖಲೆಯನ್ನು ಮಾಡಿದ್ದಾರೆ. ಇದುವರೆಗೂ ಟಾಲಿವುಡ್‌ನಲ್ಲಿ ಯಾರ ಹೆಸರಿನಲ್ಲೂ ಇರದ ಒಂದು ದಾಖಲೆಯನ್ನು ಸೃಷ್ಟಿಸಿದ್ದಾರೆ. ಇಷ್ಟಕ್ಕೂ ಆ ದಾಖಲೆಯೇನು ಎಂಬ ಪ್ರಶ್ನೆ ಬಂತಾ. ಹಾಗಿದ್ದರೆ ಇಲ್ಲಿ ಕೇಳಿ.

ಮೇ 20ರಂದು ತಾರಕ್ ಹುಟ್ಟುಹಬ್ಬವಿತ್ತು. ಪ್ರತೀ ವರ್ಷ ತಾರಕ್ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ದೊಡ್ಡ ಮಟ್ಟದಲ್ಲೇ ಆಚರಿಸುತ್ತಿದ್ದರು. ಆದರೆ, ಈ ಬಾರಿ ಲಾಕ್‌ಡೌನ್ ಇದ್ದುದರಿಂದ ಆ ತರಹದ ಸಂಭ್ರಮಾಚರಣೆಗೆ ಜಾಗ ಇರಲಿಲ್ಲ. ಪ್ರತೀ ವರ್ಷ ಅಭಿಮಾನಿಗಳ ಜತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ತಾರಕ್‌ಗೆ ಈ ಬಾರಿ ಅಂಥದ್ದೊಂದು ಅವಕಾಶ ಸಿಗಲಿಲ್ಲ. ಹಾಗಂತ ಅಭಿಮಾನಿಗಳು ಸುಮ್ಮನೆ ಇರಲಿಲ್ಲ. ಟ್ವಿಟರ್ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದರು.

ಮೂಲಗಳ ಪ್ರಕಾರ ಮೇ 20ರಂದು ಟ್ವಿಟರ್‌ನಲ್ಲಿ ತಾರಕ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿ 21.5 ಮಿಲಿಯನ್ ಟ್ವೀಟ್‌ಗಳು ದಾಖಲಾಗಿವೆಯಂತೆ. ಇಡೀ ದಿನ ಅವರ ಹುಟ್ಟುಹಬ್ಬದ ವಿಷಯ ಟ್ರೆಂಡಿಂಗ್‌ನಲ್ಲಿತ್ತಂತೆ. ಹಾಗಾಗಿ ಇದೊಂದು ಹೊಸ ದಾಖಲೆ ಎಂದು ಹೇಳಲಾಗುತ್ತಿದೆ.

ತಾರಕ್‌ಗೆ ವಿಶ್ ಮಾಡಿದವರಲ್ಲಿ ಅಭಿಮಾನಿಗಳು, ಚಿತ್ರರಂಗದವರು ಮತ್ತು ಹಿತೈಷಿಗಳು ಮಾತ್ರವಲ್ಲ, ತೆಲುಗುದೇಶಂ ಪಕ್ಷದ ಹಲವರು ಸಹ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಈಗಾಗಲೇ ಜನಪ್ರಿಯತೆಯ ಉತ್ತುಂಗದಲ್ಲಿರುವ ತಾರಕ್‌ಗೆ, ಈ ದಾಖಲೆ ಇನ್ನಷ್ಟು ಜನಪ್ರಿಯತೆಯನ್ನು ಹೆಚ್ಚಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಇನ್ನು ತಮಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿರುವ ಎಲ್ಲರಿಗೂ ತಾರಕ್ ಧನ್ಯವಾದಗಳನ್ನು ತಿಳಿಸಿದ್ದಾರೆ. ಎಲ್ಲರ ಶುಭಾಶಯಗಳಿಂದಾಗಿ, ಈ ಹುಟ್ಟುಹಬ್ಬ ಬಹಳ ವಿಶೇಷವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net