

ಬೆಂಗಳೂರು: ತಾಪ್ಸಿ ಪನ್ನು ಬ್ಯಾಟ್ ಹಿಡಿದಿದ್ದಾರೆ. ಈಗಷ್ಟೇ ‘ರಶ್ಮಿ ರಾಕೆಟ್’ ಎಂಬ ಚಿತ್ರವನ್ನು ಮುಗಿಸಿರುವ ಅವರು, ಒಂದಿಷ್ಟು ರಿಲ್ಯಾಕ್ಸ್ ಆಗುವುದಕ್ಕೆ ಕ್ರಿಕೆಟ್ ಆಡುವುದಕ್ಕೆ ಬ್ಯಾಟ್ ಹಿಡಿದಿರಬಹುದು ಎಂದುಕೊಂಡರೆ ಅದು ತಪು್ಪ. ತಾಪ್ಸಿ ಬ್ಯಾಟ್ ಹಿಡಿದಿರುವುದು ಹೊಸ ಚಿತ್ರಕ್ಕಾಗಿ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಬಯೋಪಿಕ್ನಲ್ಲಿ ತಾಪ್ಸಿ ನಟಿಸುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಿದೆ. ಈ ಸಂಬಂಧ, ತಾಪ್ಸಿ ತರಬೇತಿಯಲ್ಲಿ ನಿರತರಾಗಿದ್ದಾರೆ. ಮೊದಲ ಹಂತವಾಗಿ ಅವರು ನೆಟ್ಸ್ನಲ್ಲಿ ಬ್ಯಾಟ್ ಹಿಡಿದು, ಮಿಥಾಲಿ ಆಗುವುದಕ್ಕೆ ಪ್ರಯತ್ನಪಡುತ್ತಿದ್ದಾರೆ.
ತಾಪ್ಸಿ ಯಾವತ್ತೂ ಕ್ರಿಕೆಟ್ ಆಡಿದವರೇ ಅಲ್ಲವಂತೆ. ‘ಒಂದೇ ಒಂದು ದಿನ ಕ್ರಿಕೆಟ್ ಆಡಿಲ್ಲ ನಾನು. ಆದರೆ, ಕ್ರಿಕೆಟ್ನ ದೊಡ್ಡ ಅಭಿಮಾನಿ. ಇದುವರೆಗೂ ಪ್ರೇಕ್ಷಕಿಯಾಗಿದ್ದ ನಾನು, ಸೀದಾ ಪಿಚ್ನಲ್ಲಿ ನಿಲ್ಲಬೇಕಿದೆ. ಇದೊಂದು ದೊಡ್ಡ ಜವಾಬ್ದಾರಿ. ಆ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸುತ್ತೀನಿ ಎಂಬ ನಂಬಿಕೆ ನನಗಿದೆ’ ಎಂದು ತಾಪ್ಸಿ ಹೇಳಿಕೊಂಡಿದ್ದಾರೆ.
ಅಂದಹಾಗೆ, ತಾಪ್ಸಿಗೆ ತರಬೇತಿ ಕೊಡುತ್ತಿರುವವರು ನೂಶಿನ್ ಆಲ್ ಖಾದರ್. ಈಗಷ್ಟೇ ಪ್ರಾಕ್ಟೀಸ್ನಲ್ಲಿ ಭಾಗವಹಿಸಿರುವ ತಾಪ್ಸಿ, ವಿಶ್ವಾಸ ಬರುತ್ತಿದ್ದಂತೆಯೇ ಚಿತ್ರೀಕರಣಕ್ಕೆ ಹೊರಡುತ್ತಾರಂತೆ. (ಏಜನ್ಸೀಸ್)