ಮತ್ತೆ ಕ್ರೀಡೆಯತ್ತ ತಾಪ್ಸೀ; ಮೂರು ವರ್ಷಗಳ ನಂತರ ತೆಲುಗಿಗೆ..

Tapsee
Published on

ನಟಿ ತಾಪ್ಸೀ ಪನ್ನುಗೆ ಕ್ರೀಡೆಗಳ ಬಗ್ಗೆ ಆಸಕ್ತಿ ಹೆಚ್ಚಾಗುತ್ತಿರುವಂತೆ ಕಾಣುತ್ತಿದೆ. ಕಾರಣ, ಇತ್ತೀಚೆಗೆ ಅವರು ಹೆಚ್ಚೆಚ್ಚು ಕ್ರೀಡಾಧರಿತ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ‘ರಶ್ಮಿ ರಾಕೆಟ್’, ಅಥ್ಲೀಟ್ ಒಬ್ಬಳ ಕುರಿತಾದ ಚಿತ್ರವಾಗಿತ್ತು. ‘ಮಿಥಾಲಿ’ ಚಿತ್ರವು ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಕುರಿತ ಬಯೋಪಿಕ್ ಆಗಿದೆ. ಅವೆರಡರ ಜತೆಗೆ ‘ಮಿಶಾನ್ ಇಂಪಾಸಿಬಲ್’ ಎಂಬ ಚಿತ್ರದಲ್ಲಿ ತಾಪ್ಸೀ ನಟಿಸಿದ್ದು, ಚಿತ್ರದ ಮೊದಲ ಪೋಸ್ಟರ್ ದೀಪಾವಳಿ ಹಬ್ಬದಂದು ಬಿಡುಗಡೆಯಾಗಿದೆ.

ತೆಲುಗು ಚಿತ್ರರಂಗದಿಂದಲೇ ವೃತ್ತಿಜೀವನ ಪ್ರಾರಂಭಿಸಿದ ತಾಪ್ಸೀ, ಬಾಲಿವುಡ್​ನಲ್ಲಿ ದೊಡ್ಡ ಹೆಸರು ಮಾಡುತ್ತಿದ್ದರೂ, ತೆಲುಗು ಚಿತ್ರರಂಗವನ್ನು ಮರೆತಿಲ್ಲ. ಆಗಾಗ ಒಂದೊಂದು ತೆಲುಗು ಚಿತ್ರದಲ್ಲಿ ನಟಿಸುವ ಪರಿಪಾಠವನ್ನು ತಾಪ್ಸೀ ಇಟ್ಟುಕೊಂಡಿದ್ದು, ‘ಮಿಶಾನ್ ಇಂಪಾಸಿಬಲ್’ ಅದರ ಮುಂದುವರೆದ ಭಾಗವಷ್ಟೇ. ಈ ಚಿತ್ರವನ್ನು ಸ್ವರೂಪ್ ನಿರ್ದೇಶಿಸಿದ್ದು, ನಿರಂಜನ್ ರೆಡ್ಡಿ, ಅನ್ವೇಶ್ ರೆಡ್ಡಿ ನಿರ್ವಿುಸಿದ್ದಾರೆ.

ಸರಿ, ‘ಮಿಶಾನ್ ಇಂಪಾಸಿಬಲ್’ ಯಾವ ಕ್ರೀಡೆಯನ್ನಾಧರಿಸಿದ ಚಿತ್ರ? ಆ ರಹಸ್ಯವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಆದರೆ, ಪೋಸ್ಟರ್​ನಲ್ಲಿ ತಾಪ್ಸಿ ಪಕ್ಕದಲ್ಲಿ ರುವ ಹುಡುಗ ಕೈಯಲ್ಲಿ ಲೆದರ್ ಬಾಲ್ ಹಿಡಿದಿರುವುದರಿಂದ ಇದೊಂದು ಕ್ರಿಕೆಟ್ ಕುರಿತಾದ ಚಿತ್ರ, ಅದರಲ್ಲೂ ಗಲ್ಲಿ ಕ್ರಿಕೆಟ್ ಇರಬಹುದು ಎಂದು ಅಂದಾಜಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net