

ತಮಿಳು ಚಿತ್ರರಂಗದಲ್ಲಿ ಜಾತಿ ಸಂರ್ಷ ಪ್ರಾರಂಭವಾದಂತಿದೆ. ತಮಿಳು ನಿರ್ದೇಶಕ ಮೋಹನ್ ಕ್ಷತ್ರಿಯನ್ ನಿರ್ದೇಶಕರಾದ ವೆಟ್ರಿಮಾರನ್, ಪ. ರಂಜಿತ್ ಮತ್ತು ವರ್ಷಾ ಭರತ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಅದಕ್ಕೆ ಕಾರಣ "ಬ್ಯಾಡ್ ಗರ್ಲ್' ಚಿತ್ರದ ಟೀಸರ್. ಹೌದು, ಇತ್ತೀಚೆಗಷ್ಟೆ "ವಿಡುದಲೈ' ಸರಣಿ ಖ್ಯಾತಿಯ ನಿರ್ದೇಶಕ ವೆಟ್ರಿಮಾರನ್ ನಿರ್ಮಾಣದ, ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಪ್ರಸ್ತುತಪಡಿಸುತ್ತಿರುವ, ವರ್ಷಾ ಭರತ್ ನಿರ್ದೇಶನದ "ಬ್ಯಾಡ್ ಗರ್ಲ್' ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ. ಅಂಜಲಿ ಶಿವರಾಮನ್, ಹೃದು ಹರೂನ್, ಶಾಂತಿಪ್ರಿಯಾ, ತೆಜೀಂತಮ್ ಅರುಣಾಸಲಂ, ಶಶಾಂಕ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು.
ಬ್ರಾಹ್ಮಣ ಕುಟುಂಬದ ಹುಡುಗಿಯೊಬ್ಬಳು ಶಾಲಾದಿನಗಳಿಂದಲೇ ಬಾಯ್ಫ್ರೆಂಡ್ ಬಯಸುವ, ಕಾಲೇಜಿಗೆ ಹೋದಂತೆ ಬಾಯ್ಫ್ರೆಂಡ್ಗಳನ್ನು ಬದಲಿಸುವ, ಮದ್ಯಪಾನ ಮಾಡುತ್ತಾ ತನ್ನದೇ ಲೋಕದಲ್ಲಿ ತೇಲುವ, ಆಕೆಯ ಆಟಗಳಿಗೆ ಪಾಲಕರು ವಿರೋಧಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಧಮಕಿ ಹಾಕುವಂತೆ ಚಿತ್ರಿಸಲಾಗಿದೆ. ಸದ್ಯ ಈ ಟೀಸರ್ಗೆ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಹೆಣ್ಣುಮಕ್ಕಳ ಸ್ವಾತಂತ್ರ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರೆ, ಕೆಲವರು ಬ್ರಾಹ್ಮಣರನ್ನೇ ಏಕೆ ಟಾರ್ಗೆಟ್ ಮಾಡುತ್ತಿದ್ದೀರಿ? ಎಂದು ಚಿತ್ರತಂಡವನ್ನು ಹಲವರು ಪ್ರಶ್ನಿಸುತ್ತಿದ್ದಾರೆ.
"ಬ್ಯಾಡ್ ಗರ್ಲ್' ಟೀಸರ್ ಬಗ್ಗೆ ನಿರ್ದೇಶಕ "ಕಬಾಲಿ', "ತಂಗಳಾನ್' ನಿರ್ದೇಶಕ ಪ. ರಂಜಿತ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರಿಗೆ "ದ್ರೌಪದಿ', "ರುದ್ರ ತಾಂಡವಂ', "ಬಕಾಸುರನ್' ನಿರ್ದೇಶಕ ಮೋಹನ್ ಸವಾಲು ಹಾಕಿದ್ದಾರೆ. "ಬ್ರಾಹ್ಮಣ ಹುಡುಗಿಯ ಖಾಸಗಿ ಜೀವನವನ್ನು ಬೋಲ್ಡ್ ಆಗಿ ತೋರಿಸುವುದು ಇವರಿಗೆ ಯಾವಾಗಲೂ ಹರ್ಷದಾಯಕ. ವೆಟ್ರಿಮಾರನ್, ಅನುರಾಗ್ ಕಶ್ಯಪ್ ಮತ್ತು ಸಂಗಡಿಗರಿಂದ ಇನ್ನೇನನ್ನು ನಿರೀಸಲು ಸಾಧ್ಯ? ಬ್ರಾಹ್ಮಣ ತಂದೆ, ತಾಯಿಯನ್ನು ವಿಲನ್ನಂತೆ ತೋರಿಸುವುದು ಹಳೆಯದಾಗಿದೆ. ನಿಮ್ಮದೇ ಜಾತಿಯ ಹುಡುಗಿಯನ್ನು ಈ ರೀತಿ ಚಿತ್ರಿಸಿ, ನಿಮ್ಮ ಕುಟುಂಬಗಳಿಗೇ ಮೊದಲು ತೋರಿಸಿ' ಎಂದು ಮೋಹನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.