ರವಿ ಮೋಹನ್ ಹೊಸ ಹೆಜ್ಜೆ : ಅಭಿನಯದ ಜತೆಗೆ ನಿರ್ದೇಶನ, ನಿರ್ಮಾಣಕ್ಕೆ ಮುಂದಾದ ತಮಿಳು ನಟ

ravi mahon
Published on

ಚೆನ್ನೈ: ಕಾಲಿವುಡ್ ನಟ ರವಿ ಮೋಹನ್ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ‘ಜಯಂ’, ‘ಎಂಗೆಯಂ ಕಾದಲ್’,‘ಉನಕ್ಕುಂ ಎನಕ್ಕುಂ’ ಸೇರಿ 30ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಕೈಯಲ್ಲಿರುವಾಗಲೇ ಅವರು ಹೊಸ ಸಾಹಸಕ್ಕೆ ಮುಂದಾಗುತ್ತಿದ್ದಾರೆ. ‘ರವಿ ಮೋಹನ್ ಸ್ಟುಡಿಯೋಸ್’ ಮೂಲಕ ನಿರ್ಮಾಣಕ್ಕೆ ಮುಂದಾಗಿದ್ದು, ಇತ್ತೀಚೆಗೆ ‘ಬ್ರೋ ಕೋಡ್’, ‘ಆರ್ಡಿನರಿ ಮ್ಯಾನ್’ ಸಿನಿಮಾಗಳನ್ನು ಘೋಷಿಸಿದ್ದಾರೆ. ಇದರಲ್ಲಿ ‘ಆರ್ಡಿನರಿ ಮ್ಯಾನ್’ ಚಿತ್ರವನ್ನು ಸ್ವತಃ ಅವರೇ ನಿರ್ದೇಶಿಸುತ್ತಿದ್ದು, ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಧರಿಸುತ್ತಿದ್ದಾರೆ. ಈ ಎರಡು ಚಿತ್ರಗಳಿಗೆ ಇತ್ತೀಚೆಗೆ ಮುಹೂರ್ತ ನೆರವೇರಿಸಲಾಯಿತು. ನಟ ಶಿವರಾಜಕುಮಾರ್ ‘ಆರ್ಡಿನರಿ ಮ್ಯಾನ್’ ಪ್ರೊಮೋ ರಿಲೀಸ್ ಮಾಡಿ, ‘ರವಿ ನನಗೆ ಸ್ನೇಹಿತನಗಿಂತ ಒಬ್ಬ ಆ್ಯಕ್ಟರ್ ಆಗಿ ಪರಿಚಯ. ‘ಜಯಂ’ ಚಿತ್ರದಿಂದ ಇಲ್ಲಿಯವರೆಗೆ ಅವರ ಬೆಳವಣಿಗೆಯನ್ನು ನೋಡಿಕೊಂಡು ಬಂದಿದ್ದೇನೆ. ಅವರೊಬ್ಬ ಅತ್ಯುತ್ತಮ ಡಾನ್ಸರ್. ಹಾಗಾಗಿ, ಸಕಲಕಲಾವಲ್ಲಭ ಎನ್ನಬಹುದು’ ಎಂದು ರವಿ ಮೋಹನ್‌ಗೆ ಶುಭ ಕೋರಿದರು.

ಎರಡು ವರ್ಷ 10 ಚಿತ್ರಗಳು

ತಮಿಳಿನ ‘ಬ್ರೋ ಕೋಡ್’ ರವಿ ನಿರ್ಮಾಣದ ಮೊದಲ ಸಿನಿಮಾ. ಈ ಚಿತ್ರಕ್ಕೆ ಕಾರ್ತಿಕ್ ಯೋಗಿ ಆ್ಯಕ್ಷನ್-ಕಟ್ ಹೇಳುತ್ತಿದ್ದು, ರವಿ ಮೋಹನ್, ಎಸ್.ಜೆ.ಸೂರ್ಯ, ಅರ್ಜುನ್ ಅಶೋಕನ್, ಕನ್ನಡದ ನಟಿ ಶ್ರದ್ಧಾ ಶ್ರೀನಾಥ್, ಮಾಳವಿಕಾ, ಗೌರಿ ಪ್ರಿಯಾ ತಾರಾಗಣದಲ್ಲಿದ್ದಾರೆ. ಹಾಗೆಯೇ ರವಿ ಮೋಹನ್ ನಿರ್ದೇಶನದ ಚೊಚ್ಚಲ ಸಿನಿಮಾ ‘ಆರ್ಡಿನರಿ ಮ್ಯಾನ್’ಗೆ ಯೋಗಿ ಬಾಬು ನಾಯಕನಾಗಿದ್ದಾರೆ. ಇನ್ನೊಂದು ‘ಖಾಕಿ ಸ್ಕಾಡ್​ ಎಂಬ ಚಿತ್ರವನ್ನು ರವಿ ಮೋಹನ್ ಅರ್ಪಿಸುತ್ತಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಸಿನಿಮಾ, ವೆಬ್ ಸಿರೀಸ್, ಡಾಕ್ಯುಮೆಂಟರಿ ಸೇರಿ 10 ಪ್ರಾಜೆಕ್ಟ್‌ಗಳನ್ನು ತಮ್ಮ ಬ್ಯಾನರ್‌ನಲ್ಲಿ ನಿರ್ಮಿಸಲಾಗುವುದು ಎಂದು ರವಿ ಮೋಹನ್ ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net