

ಈಗಾಗಲೇ ಪ್ರಿಯಾಂಕಾ ಚೋಪ್ರಾ ಮತ್ತು ಕರೀನಾ ಕಪೂರ್ ತಮ್ಮ ಪುಸ್ತಕಗಳನ್ನು ಹೊರತಂದಿದ್ದಾರೆ. ಈ ಮೂಲಕ ನಟನೆಯ ಜತೆಗೆ, ಬರವಣಿಗೆಯಲ್ಲೂ ತಮಗೆ ಆಸಕ್ತಿ ಇರುವುದನ್ನು ಜಗಜ್ಜಾಹೀರು ಮಾಡಿದ್ದಾರೆ. ಈಗ ಆ ಸಾಲಿಗೆ ತಮನ್ನಾ ಸಹ ಸೇರಿಕೊಂಡಿದ್ದಾರೆ. ‘ಬ್ಯಾಕ್ ಟು ದಿ ರೂಟ್ಸ್’ ಎಂಬ ಪುಸ್ತಕ ಬರೆದಿರುವ ತಮನ್ನಾ, ಆ ಪುಸ್ತಕ ಬಿಡುಗಡೆ ಮಾಡಿದ್ದಾರೆ.
‘ಬ್ಯಾಕ್ ಟು ದಿ ರೂಟ್ಸ್’ ಪುಸ್ತಕದಲ್ಲಿ, ಹಳೆಯ ಕಾಲದಲ್ಲಿ ಆರೋಗ್ಯಕರ ಜೀವನಕ್ಕೆ ಏನೆಲ್ಲ ಮಾಡಲಾಗುತ್ತಿತ್ತು, ಜನ ದಿನಚರಿಯನ್ನು ಹೇಗೆಲ್ಲ ರೂಪಿಸಿಕೊಂಡಿದ್ದರು, ಆ ಆರೋಗ್ಯಕರ ಶೈಲಿಯನ್ನು ಬಿಟ್ಟು ಇಂದಿನ ತಲೆಮಾರಿನವರು ಆರೋಗ್ಯವನ್ನು ಹೇಗೆ ಕೆಡಿಸಿಕೊಳ್ಳುತ್ತಿದ್ದಾರೆ ಎಂಬ ಹಲವು ವಿಷಯಗಳನ್ನು ಹೇಳಿದ್ದಾರೆ. ಈ ಪುಸ್ತಕವನ್ನು ಅವರು ಲ್ಯೂಕ್ ಕುಟ್ಹಿನೋ ಜತೆಗೆ ಸೇರಿಕೊಂಡು ರಚಿಸಿದ್ದಾರೆ. ಇನ್ನು, ಕೆಲಸದ ವಿಷಯದ ಬಗ್ಗೆ ಹೇಳುವುದಾದರೆ, ತಮನ್ನಾ ಅಭಿನಯದ ‘ಮೆಸ್ಟ್ರೋ’, ‘ಸೀಟಿಮಾರ್’ ಮತ್ತು ‘ಗುರ್ತಂದ ಸೀತಾಕಲಂ’ ಚಿತ್ರಗಳ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿವೆ. ಇದಲ್ಲದೆ, ‘ಪ್ಲಾನ್ ಎ ಪ್ಲಾನ್ ಬಿ’ ಚಿತ್ರಗಳಲ್ಲಿ ನಟಿಸುವುದಕ್ಕೆ ತಮನ್ನಾ ಒಪ್ಪಿದ್ದಾರೆ. - ಏಜೆನ್ಸೀಸ್