ಬೆಂಗಳೂರು: ಕಳೆದ 40 ವರ್ಷಗಳಲ್ಲಿ 50ಕ್ಕೂ ಹೆಚ್ಚು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ, ‘ದಂಡನಾಯಕ’ ಎಂಬ ಚಿತ್ರವನ್ನೂ ನಿರ್ದೇಶಿಸಿದ್ದ ವೈದ್ಯನಾಥ್, ಇದೀಗ 'ತಲಾಖ್ ತಲಾಖ್ ತಲಾಖ್' ಎಂಬ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿರುವುದಷ್ಟೇ ಅಲ್ಲ, ಬಿಡುಗಡೆ ಮಾಡುವುದಕ್ಕೆ ತಯಾರಿ ನಡೆಸಿದ್ದಾರೆ.
ಈ ಚಿತ್ರದಲ್ಲಿ ಮುಸ್ಲಿಂ ಮಹಿಳೆ ‘ತಲಾಖ್ ತಲಾಖ್ ತಲಾಖ್’ ಎಂದು ಹೇಳಿದ ನಂತರ ಅನುಭವಿಸುವ ಯಾತನೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದ್ದು, ಈಗಾಗಲೇ ಚಿತ್ರವು ಆಸ್ಟ್ರೇಲಿಯ, ಚೆನ್ನೈ ಮುಂತಾದ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಮೆಚ್ಚುಗೆ ಗಳಿಸಿದೆ. ಈ ಚಿತ್ರವನ್ನು ಮುಂದಿನ ತಿಂಗಳು ಕರ್ನಾಟಕದಲ್ಲಿ ಬಿಡುಗಡೆ ಮಾಡುವ ತಯಾರಿಯನ್ನು ವೈದ್ಯನಾಥ್ ಮಾಡಿಕೊಳ್ಳುತ್ತಿದ್ದಾರೆ.
ನೂರ್ ಜಹೀರ್ ಅವರು ಬರೆದ ಪುಸ್ತಕವನ್ನು ಕನ್ನಡದಲ್ಲಿ ಅಬ್ದುಲ್ ರೆಹಮಾನ್ ಪಾಶಾ ಅವರು ಅನುವಾದ ಮಾಡಿದ್ದು, ಅದನ್ನು ಆಧರಿಸಿ ವೈದ್ಯನಾಥ ಚಿತ್ರಕಥೆ ರಚಿಸಿದ್ದಾರೆ. ಮುಸ್ಲಿಂ ಸಮುದಾಯದ ಹಲವು ವ್ಯಕ್ತಿಗಳ ಜೊತೆ ಮಾತನಾಡಿ ಕೆಲವು ಸೂಕ್ಷ್ಮ ವಿಚಾರಗಳನ್ನು ತೆರೆಯ ಮೇಲೆ ತರುವ ಪ್ರಯತ್ನವನ್ನು ವೈದ್ಯನಾಥ್ ಈ ಚಿತ್ರದಲ್ಲಿ ಮಾಡಿದ್ದಾರೆ.
ಹಿರಿಯ ನಟ ಶ್ರೀನಿವಾಸಮೂರ್ತಿ ಈ ಚಿತ್ರದಲ್ಲಿ ಮೌಲ್ವಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀನಿವಾಸಮೂರ್ತಿ ಸಹ ವೈದ್ಯನಾಥ ಅವರಂತೆ ಸಿದ್ದಲಿಂಗಯ್ಯ ಗರಡಿಯಿಂದ ಬಂದವರು. ನಿರ್ದೇಶಕರ ಜತೆಗಿನ 45 ವರ್ಷಗಳ ಸ್ನೇಹದಿಂದ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಆರ್ ಜೆ ನೇತ್ರ ಅವರಿಗೆ ಈ ಪಾತ್ರ ವಿಶೇಷ ಹಾಗೂ ವಿಭಿನ್ನವಂತೆ. 'ಮುಸ್ಲಿಂ ಮಹಿಳೆ ತಲಾಖ್ ಹೇಳಿಸಿಕೊಂಡ ತಕ್ಷಣ ಆಗುವ ನೋವುಗಳನ್ನು ಇಲ್ಲಿ ಬಣ್ಣಿಸಲಾಗಿದೆ. ನಾನಂತೂ ಈ ಚಿತ್ರವನ್ನು ಸದಾ ಸ್ಮೃತಿಪಟಲದಲ್ಲಿ ಇಟ್ಟುಕೊಂಡಿರುತ್ತೇನೆ. ಈ ಚಿತ್ರಕ್ಕೆ ಪ್ರೋತ್ಸಾಹ ಆಗತ್ಯ' ಎನ್ನುತ್ತಾರೆ ನೇತ್ರ.
'ತಲಾಖ್ ತಲಾಖ್ ತಲಾಖ್' ಚಿತ್ರದಲ್ಲಿ ನೇತ್ರ ಮತ್ತು ಶ್ರೀನಿವಾಸಮೂರ್ತಿ ಜತೆಗೆ ಸುಚೇತನ ಸ್ವರೂಪ್ ವೈದ್ಯನಾಥ, ಶಮಂತ್ ವೈದ್ಯ, ರವಿ ಭಟ್, ಕೆ ವಿ ಮಂಜಯ್ಯ, ವೀಣಾ ಸುಂದರ್ ಮುಂತಾದವರು ಅಭಿನಯಿಸಿದ್ದು ಪ್ರವೀಣ್ ಗೋಡ್ಕಿಂಡಿ ಅವರ ಸಂಗೀತ, ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.