

ಬೆಂಗಳೂರು: ಮೇಕಪ್ ಕಲಾವಿದನಾಗಿ ಕನ್ನಡ ಚಿತ್ರರಂಗಕ್ಕೆ ಬಂದವರು ದೇವರಾಜ್ ಕುಮಾರ್. ನಂತರ ನಿರ್ದೇಶಕರಾದರು. ಮೂರು ಚಿತ್ರಗಳನ್ನು ನಿರ್ದೇಶಿಸಿದ ಅವರು, ಈಗ ಹೀರೋ ಆಗಿದ್ದಾರೆ. 'ತಾಜ್ ಮಹಲ್ 2' ಎಂಬ ಚಿತ್ರವನ್ನು ದೇವರಾಜ್ ನಿರ್ದೇಶನ ಮಾಡಿದ್ದು, ಅದರಲ್ಲಿ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಸೆಪ್ಟೆಂಬರ್ 2 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
'ತಾಜ್ ಮಹಲ್ 2' ಕುರಿತು ಮಾತನಾಡುವ ದೇವರಾಜ್, '2019ರಲ್ಲಿ ಈ ಚಿತ್ರವನ್ನು ಆರಂಭಿಸಿದ್ದೆವು. 2020ರಲ್ಲಿ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿತ್ತು. ಕರೊನಾದಿಂದ ಚಿತ್ರ ತಡವಾಯಿತು. ಇತ್ತೀಚೆಗೆ ಈ ಚಿತ್ರದ ಹಾಡೊಂದನ್ನು ಉತ್ತರ ಕರ್ನಾಟಕದಲ್ಲಿ ಜವಳಿ ಸಚಿವರಾದ ಶಂಕರ್ ಪಾಟೀಲ್ ಬಿಡುಗಡೆ ಮಾಡಿದರು. ಆ ಹಾಡು ಐದು ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿದೆ. ಟ್ರೇಲರ್ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರ ಸೆಪ್ಟೆಂಬರ್ 2 ರಂದು ಬಿಡುಗಡೆಯಾಗಲಿದೆ' ಎನ್ನುತ್ತಾರೆ.
ಈ ಚಿತ್ರವನ್ನು ಯಾವುದೇ ರಾಜಿ ಇಲ್ಲದೇ ಮಾಡಿದ್ದೇವೆ ಎನ್ನುವ ದೇವರಾಜ್, 'ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದ್ದು, ಯಾವುದೇ ರಾಜಿ ಇಲ್ಲದೆ ಮಾಡಿದ್ದೇವೆ. ಚಿತ್ರಕ್ಕೆ ಟೈಟಲ್ ಸಮಸ್ಯೆ ಎದುರಾಗಿತ್ತು. ಈ ಸಂದರ್ಭದಲ್ಲಿ ನಮ್ಮ ನೆರವಿಗೆ ಬಂದವರು ಉಮೇಶ್ ಬಣಕಾರ್. ಇನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಸಹ ಸಾಕಷ್ಟು ಸಹಾಯ ಮಾಡಿದ್ದಾರೆ' ಎನ್ನುತ್ತಾರೆ ದೇವರಾಜ್ ಕುಮಾರ್.
'ತಾಜ್ ಮಹಲ್ 2' ಚಿತ್ರವು ಶ್ರೀ ಗಂಗಾಬಿಂಕೆ ಎಂಟರ್ಪ್ರೈಸಸ್ ಸಂಸ್ಥೆಯಡಿ ನಿರ್ಮಾಣವಾಗಿದೆ. ಚಿತ್ರದಲ್ಲಿ ದೇವರಾಜ್ಗೆ ನಾಯಕಿಯಾಗಿ ಸಮೃದ್ಧಿ ಶುಕ್ಲಾ ಅಭಿನಯಿಸಿದ್ದು, ವಿಕ್ಟರಿ ವಾಸು, ಕಾಕ್ರೋಚ್ ಸುಧಿ, ಶೋಭರಾಜ್, ತಬಲಾ ನಾಣಿ ಮುಂತಾದವರು ನಟಿಸಿದ್ದಾರೆ. ವಿಕ್ರಂ ಸೆಲ್ವ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ವೀನಸ್ ಮೂರ್ತಿ ಅವರ ಛಾಯಾಗ್ರಹಣವಿದೆ.