ತಾಪ್ಸೀ ಪನ್ನು ಸಂಬಳಕ್ಕೆ ಬೀಳುತ್ತೆ ಕತ್ತರಿ!

taapsee_pannu_2
Published on

ಸಿನಿಮಾರಂಗದ ಕೆಲಸಗಳೆಲ್ಲವೂ ಸ್ಥಗಿತಗೊಂಡಿದ್ದರಿಂದ ನಿರ್ಮಾಪಕರಿಗೆ ಆದಾಯದ ಮೂಲವೇ ಇಲ್ಲದಂತಾಗಿದೆ. ನಷ್ಟದ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದೆಲ್ಲವನ್ನು ತಗ್ಗಿಸುವ ನಿಟ್ಟಿನಲ್ಲಿ ಕೆಲ ಸಿನಿಮಾ ತಾರೆಯರು ಸಂಬಳವನ್ನು ಕಡಿತ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದರು. ಇದೀಗ ಆ ವಿಚಾರದ ಬಗ್ಗೆ ಮಾತನಾಡಿರುವ ಬಾಲಿವುಡ್​ ನಟಿ ತಾಪ್ಸೀ ಪನ್ನು, ಮುಂದಿನ ದಿನಗಳಲ್ಲಿ ಸಂಬಳದಲ್ಲಿ ಒಂದಷ್ಟು ಕಡಿತ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

ಹೌದು, ಈಗಾಗಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಪೋಸ್ಟ್ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆಯಾದರೂ, ಆ ಸಿನಿಮಾಗಳಿಗೆ ಬಿಡುಗಡೆ ಭಾಗ್ಯ ಯಾವಾಗ ಎಂಬುದೇ ಗೊತ್ತಿಲ್ಲ. ಒಂದಷ್ಟು ನಿರ್ಮಾಪಕರಂತೂ ಸದ್ಯದ ಸ್ಥಿತಿ ನೋಡಿ ಶೂಟಿಂಗೂ ಬೇಡ, ಸಿನಿಮಾನೂ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಸ್ಟಾರ್ ಕಲಾವಿದರು ತಮ್ಮ ಸಂಬಳವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಇತ್ತೀಚೆಗಷ್ಟೇ ಬಾಲಿವುಡ್​ ನಿರ್ಮಾಪಕರ ವಲಯ ಕೋರಿತ್ತು. ಆ ಮಾತಿಗೆ ತಾಪ್ಸೀ ಓಕೆ ಅಂದಿದ್ದು, ನನ್ನ ಮುಂದಿನ ಸಿನಿಮಾಗಳಿಗೆ ನಾನು ಸಂಬಳವನ್ನು ಕಡಿತಮಾಡಿಕೊಳ್ಳಲು ತಯಾರಿದ್ದೇನೆ ಎಂದಿದ್ದಾರೆ.

ತಾಪ್ಸೀ ಪನ್ನು ನಾಯಕಿಯಾಗಿ ನಟಿಸಿರುವ ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಒಳ್ಳೇ ಕಮಾಯಿ ಮಾಡಿವೆ. ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದು, ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಗಳಲ್ಲಿ ಅವರ ಚಿತ್ರಗಳು ರಿಮೇಕ್​ ಆಗುತ್ತಿವೆ. ಲಾಕ್​ಡೌನ್​ ಶುರುವಾಗುವುದಕ್ಕೂ ಮುನ್ನ ಬಿಡುಗಡೆಯಾದ ‘ಥಪ್ಪಡ್​’ ಸಿನಿಮಾ, ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಂಡರೂ, ಚಿತ್ರಮಂದಿರಗಳಿಂದ ಹಣ ಬರಲಿಲ್ಲ. ಚಿತ್ರಕ್ಕೆ ಲಾಕ್​ಡೌನ್​ ಬಿಸಿ ತಟ್ಟಿದರೂ, ಒಟಿಟಿ ವೇದಿಕೆ ಅಮೆಜಾನ್​ನಿಂದ ಒಳ್ಳೆ ಮೊತ್ತವನ್ನೇ ಪಡೆದುಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net