ಕಾದಂಬರಿಯಾಧಾರಿತ ‘ಸ್ವಪ್ನಮಂಟಪ’: ಇದೇ 25ಕ್ಕೆ ಬಿಡುಗಡೆಯಾಗಲಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಚಿತ್ರ

swpna mantapa
Published on

ಬೆಂಗಳೂರು: ಕನ್ನಡದಲ್ಲಿ ಕೃತಿ ಹಾಗೂ ಕಾದಂಬರಿಯಾಧಾರಿತ ಸಿನಿಮಾಗಳು ಕಡಿಮೆಯಾಗುತ್ತಿವೆ ಎಂಬ ಚರ್ಚೆ ನಡೆಯುತ್ತಿರುವಾಗಲೇ ‘ಸ್ವಪ್ನಮಂಟಪ’ ಎಂಬ ಕಾದಂಬರಿಯಾಧಾರಿತ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ರಚಿಸಿರುವ ಇದೇ ಹೆಸರಿನ ಕಾದಂಬರಿಗೆ ಸ್ವತಃ ಅವರೇ ದೃಶ್ಯರೂಪ ನೀಡಿದ್ದಾರೆ. ಚಿತ್ರಕಥೆ, ಸಂಭಾಷಣೆಯ ಜತೆಗೆ ನಿರ್ದೇಶನದ ಹೊಣೆ ಅವರೇ ಹೊತ್ತಿದ್ದಾರೆ. ನಟ ವಿಜಯ್ ರಾಘವೇಂದ್ರ, ‘ಕನ್ನಡತಿ’ ಖ್ಯಾತಿಯ ರಂಜಿನಿ ರಾಘವನ್ ಮುಖ್ಯಭೂಮಿಕೆಯಲ್ಲಿದ್ದು, ಈಗಾಗಲೇ ದೇಶ, ವಿದೇಶದ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಚಿತ್ರವು ಇದೀಗ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸಿದೆ. ಇದೇ ತಿಂಗಳ 25ಕ್ಕೆ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಲಿದೆ.

ಬರಗೂರು ರಾಮಚಂದ್ರಪ್ಪ, ‘25 ವರ್ಷಗಳ ಹಿಂದೆ ಬರೆದಿದ್ದ ಕಾದಂಬರಿಯೇ ಇದೀಗ ಸಿನಿಮಾ ರೂಪ ಪಡೆದುಕೊಂಡಿದೆ. ಈ ಹಿಂದೆ ರಾಜ ತನ್ನ ಎರಡನೇ ಹೆಂಡತಿಗಾಗಿ ನಿರ್ಮಿಸಿದ್ದ ಮಂಟಪವನ್ನು ಸ್ವಪ್ನ ಮಂಟಪ ಎಂದು ಕರೆಯುತ್ತಿದ್ದರು. ಆದರೆ, ಮುಂದೆ ಅದೇ ಮಂಟಪವನ್ನು ಕೆಲವರು ಕೆಡವಿ ಅನ್ಯ ಕಾರ್ಯಗಳಿಗೆ ಬಳಸಲು ಯತ್ನಿಸಿದಾಗ ನಾಯಕ, ನಾಯಕಿ ಜಾಗೃತಿ ಮೂಡಿಸಿ, ಹೇಗೆ ಆ ಪಾರಂಪರಿಕ ಸ್ಥಳವನ್ನು ಉಳಿಸುತ್ತಾರೆ ಎನ್ನುವುದೇ ಚಿತ್ರದ ಕಥೆ. ನಾಯಕ-ನಾಯಕಿ ಇಬ್ಬರು ದ್ವಿಪಾತ್ರದಲ್ಲಿರುವುದು ಮತ್ತೊಂದು ವಿಶೇಷ’ ಎಂದು ಮಾಹಿತಿ ನೀಡಿದರು. ವಿಜಯ್ ರಾಘವೇಂದ್ರ, ‘ಪ್ರತಿಯೊಬ್ಬ ನಟನಿಗೂ ಇಂತಹ ಒಬ್ಬ ನಿರ್ದೇಶಕರ ಚಿತ್ರದಲ್ಲಿ ನಟಿಸಬೇಕು ಎಂಬ ಆಸೆ ಇರುತ್ತದೆ. ನನಗೆ ಬರಗೂರು ರಾಮಚಂದ್ರಪ್ಪರ ನಿರ್ದೇಶನದಲ್ಲಿ ನಟಿಸಬೇಕೆಂಬ ಆಸೆಯಿತ್ತು. ಇದೀಗ ಅದು ಈಡೇರಿದೆ’ ಎಂದು ಖುಷಿ ಹಂಚಿಕೊಂಡರು. ಶಮಿತಾ ಮಲ್ನಾಡ್ ಸಂಗೀತ, ನಾಗರಾಜ ಅದವಾನಿ ಛಾಯಾಗ್ರಹಣ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net