

ಬೆಂಗಳೂರು: ಮೊದಲು ಚೀನಾದಲ್ಲಿ ಕಾಣಿಸಿಕೊಂಡ ಕರೊನಾದಿಂದ ಇಡೀ ಜಗತ್ತೇ ಸಾಕಷ್ಟು ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಚೀನಾ ಉತ್ಪನ್ನಗಳನ್ನು ಬಾಯ್ಕಾಟ್ ಮಾಡಬೇಕು ಎಂದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ. ‘ಹೆಬ್ಬುಲಿ’ ಮತ್ತು ‘ಪೈಲ್ವಾನ್’ ಚಿತ್ರಗಳ ನಿರ್ದೇಶಕ ಕೃಷ್ಣ ಸಹ ಚೀನಾ ಉತ್ಪನ್ನಗಳನ್ನು ಖರೀದಿಸಬೇಡಿ ಎಂದು ಟ್ವೀಟ್ ಮಾಡಿದ್ದಾರೆ.
‘ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧಗಳಿರುವುದರಿಂದ, ಆ ದೇಶದ ವಸ್ತುಗಳನ್ನು ನಿಷೇಧಿಸುವುದಕ್ಕೆ ಕಷ್ಟವಾಗಬಹುದು. ಆದರೆ, ಪ್ರಜೆಗಳಾಗಿ ನಾವು ಚೀನಾದ ವಸ್ತುಗಳನ್ನು ದೂರ ಇಡಬಹುದು. ಚೀನಾದ ವಸ್ತುಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ದೂರ ಇಡುವ ಮೂಲಕ ನಮ್ಮ ಆರ್ಥಿಕತೆಯನ್ನು ನಾವೇ ಬೆಳೆಸೋಣ. ಗಾಂಧೀಜಿ ಅವರ ಅಸಹಾಕಾರ ಚಳವಳಿಯನ್ನು ಪಾಲಿಸೋಣ. ಹಂತಹಂತವಾಗಿ ಈ ನಿಟ್ಟಿನಲ್ಲಿ ಹೆಜ್ಜೆ ಇಡೋಣ. ಮುಂದಿನ ದಿನಗಳಲ್ಲಿ ಶೇ 100ರಷ್ಟು ಭಾರತೀಯ ಉತ್ಪನ್ನಗಳನ್ನೇ ಎಲ್ಲರೂ ಬಳಸೋಣ’ ಎಂದು ಕೃಷ್ಣ ಹೇಳಿದ್ದಾರೆ.
ತಾವು ಈ ವಿಷಯವನ್ನು ಭಾವನಾತ್ಮಕವಾಗಿ ಹೇಳುತ್ತಿಲ್ಲ ಎಂದು ಹೇಳಿರುವ ಅವರು, ‘ಈ ಕುರಿತು ನಾವು ಮೊದಲು ಜಾಗೃತಿ ಮೂಡಿಸಬೇಕು. ಜಾಗೃತಿ ಮೂಡಿದಾಗಲಷ್ಟೇ ಹೆಚ್ಚುಹೆಚ್ಚು ಜನ ಈ ಸ್ವದೇಶಿ ಚಳವಳಿಯಲ್ಲಿ ಭಾಗವಹಿಸುತ್ತಾರೆ. ಹಾಗೆ ಸಂಖ್ಯೆ ಹೆಚ್ಚಾದಾಗಲೆಲ್ಲಾ ನಮ್ಮ ಆರ್ಥಿಕತೆ ಇನ್ನಷ್ಟು ಗಟ್ಟಿಯಾಗುತ್ತದೆ. ಆಗ ನಮ್ಮ ದೇಶವನ್ನು ಯಾರೂ ಕಂಟ್ರೋಲ್ ಮಾಡುವುದಕ್ಕೆ ಸಾಧ್ಯವಿಲ್ಲ. ಇದು ಎಲ್ಲರೂ ಕೈಜೋಡಿಸಿದಾಗಷ್ಟೇ ಸಾಧ್ಯ’ ಎಂದು ಕೃಷ್ಣ ಹೇಳಿದ್ದಾರೆ.
ಕೃಷ್ಣ ಅವರ ಈ ಕರೆಗೆ, ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಈ ಕುರಿತು ಹಲವರು, ಕೃಷ್ಣಗೆ ಬೆಂಬಲ ಸೂಚಿಸಿದ್ದಾರೆ.