

ಬೆಂಗಳೂರು: ಕನ್ನಡ ರ್ಯಾಪರ್ ಚಂದನ್ ಶೆಟ್ಟಿ, ಸಂಗೀತದ ಜತೆ ನಟನೆಯಲ್ಲೂ ಬಿಜಿಯಾಗಿದ್ದಾರೆ. ಕಳೆದ ವರ್ಷ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ರಿಲೀಸ್ ಆಗಿತ್ತು. ಇದೀಗ ಚಂದನ್ ಚೊಚ್ಚಲ ಬಾರಿಗೆ ನಾಯಕನಾಗಿರುವ ‘ಸೂತ್ರಧಾರಿ’ ತೆರೆಗೆ ಬರಲು ರೆಡಿಯಾಗಿದೆ. ನಟನೆ ಜತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದು, ಕೆಲ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಕಿರಣ್ ಕುಮಾರ್ ‘ಸೂತ್ರಧಾರಿ’ಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇಲ್ಲಿ ಚಂದನ್‌ಗೆ ನಟಿ ಅಪೂರ್ವಾ ಜೋಡಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಮಂಗಳವಾರ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಮೇ 9ರಂದು ‘ಸೂತ್ರಧಾರಿ’ ಬಿಡುಗಡೆಯಾಗಲಿದೆ. ನಾಯಕ ಚಂದನ್ ಶೆಟ್ಟಿ, ‘ನಾಯಕ ನಟನಾಗಿ ನನ್ನ ಮೊದಲನೇ ಚಿತ್ರವಿದು. ಈ ನಡುವೆ ನನ್ನ ಜೀವನದಲ್ಲಿ ಹಲವಾರು ಘಟನೆಗಳು ನಡೆದುಹೋದವು. ಆದರೆ, ಅದೆಲ್ಲಕ್ಕಿಂತ ಸಿನಿಮಾಗೆ ಮೊದಲ ಆದ್ಯತೆ ನೀಡಿದ್ದೇನೆ’ ಎಂದರು. ನಾಯಕಿ ಅಪೂರ್ವಾ, ‘ಇದೊಂದು ಲಾಂಗ್ ಜರ್ನಿ. ತಂಡದ ಜತೆ ಎಮೋಷನ್ ಬಾಂಡಿಂಗ್ ಇದೆ. ಸದ್ಯ ನಾನು ಪರೀಕ್ಷೆ ಬರೆದಿದ್ದು, ಲಿತಾಂಶಕ್ಕೆ ಕಾಯುತ್ತಿದ್ದೇನೆ’ ಎಂದು ಖುಷಿ ಹಂಚಿಕೊಂಡರು. ಚಿತ್ರಕ್ಕೆ ಪಿ.ಕೆ.ಎಚ್. ದಾಸ್ ಛಾಯಾಗ್ರಹಣ ಇದೆ. ಪ್ರಶಾಂತ್ ನಟನಾ, ಸುಶ್ಮಿತಾ, ಪಲ್ಲವಿ, ಮೀರಾ ಕಲಾಬಳಗದಲ್ಲಿದ್ದಾರೆ.
ನಾನು, ಚಂದನ್ ಮದುವೆಯಾಗುತ್ತಿಲ್ಲ: ‘ಸೂತ್ರಧಾರಿ’ ಚಿತ್ರದಲ್ಲಿ ‘ಡ್ಯಾಷ್’ ಸಾಂಗ್‌ಗೆ ಚಂದನ್ ಜತೆ ಸಂಜನಾ ಆನಂದ್ ಹೆಜ್ಜೆ ಹಾಕಿದ್ದಾರೆ. ಚಂದನ್ ಹಾಗೂ ನಿವೇದಿತಾ ಗೌಡ ದಾಂಪತ್ಯ ಜೀವನಕ್ಕೆ ವಿಚ್ಛೇದನ ನೀಡಿದ್ದ ಸಮಯದಲ್ಲೇ ರಿಲೀಸ್ ಆಗಿದ್ದ ಈ ಸಾಂಗ್ ವೈರಲ್ ಆಗಿತ್ತು. ಆ ಬಳಿಕ ಚಂದನ್, ಸಂಜನಾ ಮದುವೆಯಾಗುತ್ತಿದ್ದಾರೆ ಎಂಬ ಪುಕಾರು ಜಾಲತಾಣದಲ್ಲಿ ಹಬ್ಬಿತ್ತು. ಈ ಬಗ್ಗೆ ಸಂಜನಾ ಸ್ಪಷ್ಟನೆ ನೀಡಿದ್ದು, ‘ಮದುವೆ ಸುದ್ದಿ ಸುಳ್ಳು. ನಾನು, ಚಂದನ್ ಇಬ್ಬರು ಒಳ್ಳೆಯ ಸ್ನೇಹಿತರಷ್ಟೇ. ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಬೇಡಿ’ ಎಂದು ಟ್ರೋಲ್‌ಗಳಿಗೆ ಮನವಿ ಮಾಡಿದರು.