

ಬೆಂಗಳೂರು: ರ್ಯಾಪ್ ಸಂಗೀತದ ಮೂಲಕ ಗಮನಸೆಳೆದಿದ್ದ ಗಾಯಕ ಚಂದನ್ ಶೆಟ್ಟಿ ಇದೀಗ ನಟನೆಯಲ್ಲೂ ಬಿಜಿಯಾಗಿದ್ದಾರೆ. ಕಳೆದ ವರ್ಷ ಅವರ ನಟನೆಯ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಬಿಡುಗಡೆಯಾಗಿತ್ತು. ಇದರ ಬೆನ್ನಲ್ಲೇ ಚಂದನ್ ಚೊಚ್ಚಲ ಬಾರಿಗೆ ಪೂರ್ಣಪ್ರಮಾಣದಲ್ಲಿ ನಾಯಕನಾಗಿ ನಟಿಸಿರುವ ‘ಸೂತ್ರಧಾರಿ’ ಚಿತ್ರವು ಇದೇ ಮೇ 9ಕ್ಕೆ ಬಿಡುಗಡೆಯಾಗಲಿದೆ. ಇಲ್ಲಿ ಅವರು ನಟನೆ ಜತೆಗೆ ಸಂಗೀತ ನಿರ್ದೇಶನ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಕೆಲ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಕಿರಣ್ ಕುಮಾರ್ ‘ಸೂತ್ರಧಾರಿ’ಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ಧ್ರುವ ಸರ್ಜಾ ಟ್ರೇಲರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ‘ನವರಸನ್ ಹಾಗೂ ಗೆಳೆಯ ಚಂದನ್ ಶೆಟ್ಟಿಗಾಗಿ ಇಲ್ಲಿಗೆ ಬಂದಿದ್ದೇನೆ. ಟ್ರೇಲರ್ ನೋಡಿದ ತಕ್ಷಣವೇ ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ ಎಂದೆನಿಸುತ್ತಿದೆ. ಇಡೀ ತಂಡದ ಶ್ರಮ ಎದ್ದು ಕಾಣುತ್ತಿದೆ. ಈ ಸಿನಿಮಾ ನೋಡಿ ನಾನು ರಿವೀವ್ ನೀಡುವೆ’ ಎಂದರು. ಇಲ್ಲಿ ಚಂದನ್‌ಗೆ ನಟಿ ಅಪೂರ್ವಾ ಜೋಡಿಯಾಗಿದ್ದಾರೆ. ‘ಹನುಮಂತನ ಪರಭಕ್ತ ಧ್ರುವ ಸರ್ಜಾ ಅವರು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು, ಸದ್ಯಕ್ಕೆ ಅವರೇ ನಮಗೆ ‘ಸೂತ್ರಧಾರಿ’. ನಮ್ಮ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ದೊರೆತಿರುವುದು ಖುಷಿ ನೀಡಿದೆ’ ಎಂದರು. ಚಿತ್ರಕ್ಕೆ ಪಿ.ಕೆ.ಎಚ್. ದಾಸ್ ಛಾಯಾಗ್ರಹಣ ಇದೆ. ಪ್ರಶಾಂತ್ ನಟನಾ, ಸುಶ್ಮಿತಾ, ಪಲ್ಲವಿ, ಮೀರಾ ಕಲಾಬಳಗದಲ್ಲಿದ್ದಾರೆ.
ಪ್ರತಿಭೆ ಗುರುತಿಸಿದ್ದು ಸರ್ಜಾ ಕುಟುಂಬ: ಮೊದಲ ಬಾರಿಗೆ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿರುವ ಚಂದನ್ ಶೆಟ್ಟಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದಾರೆ. ತಮ್ಮ ಪಾತ್ರ ಹಾಗೂ ಸಿನಿಮಾ ಕುರಿತು, ‘‘ಸೂತ್ರಧಾರಿ’ ನನ್ನ ಮೊದಲ ಸಿನಿಮಾ. ಪೊಲೀಸ್ ಅಧಿಕಾರಿಯಾಗಿದ್ದೇನೆ. ನಾನು ನಾಯಕನಾಗಲೂ ನವರಸನ್ ಅವರೇ ಪ್ರಮುಖ ಕಾರಣ. ನನ್ನ ನಂಬಿದ್ದಕ್ಕೆ ಆಭಾರಿ. ಇನ್ನು ನನ್ನ ಪ್ರತಿಭೆಯನ್ನು ಗುರುತಿಸಿದ್ದು ಸರ್ಜಾ ಕುಟುಂಬದವರು. ಈ ಸಮಯದಲ್ಲಿ ‘ಅದ್ದೂರಿ’ ಚಿತ್ರ ಬಿಡುಗಡೆಯ ದಿನ ನೆನಪಾಗುತ್ತಿದೆ. ಹಿಂದಿನ ದಿನ ಬೆಳಗಿನ ಜಾವದವರೆಗೂ ನಾನು, ಧ್ರುವ ಥಿಯೇಟರ್‌ಗಳಿಗೆ ಭೇಟಿ ನೀಡಿ, ಬಂದು ಮಲಗಿದ್ದೆವು. ಸ್ವಲ್ಪ ಹೊತ್ತಿನ ಬಳಿಕ ನೋಡುತ್ತೇನೆ. ಅಲ್ಲಿ ಧ್ರುವ ಇರಲಿಲ್ಲ. ಅವರು ಚಿತ್ರಮಂದಿರದತ್ತ ಹೋಗಿದ್ದರು. ಮಾರ್ನಿಂಗ್ ಶೋ ಬಳಿಕ ಧ್ರುವ ಅವರ ಅಭಿನಯ ನೋಡಿ ಸಂಭ್ರಮಿಸಿದ್ದು, ಇನ್ನು ನೆನಪಿದೆ’ ಎನ್ನುತ್ತಾರೆ.