ಸಸ್ಪೆನ್ಸ್, ಥ್ರಿಲ್ಲರ್​ ಸಿನಿಮಾ ಕಾಲಾಂತಕ; ‘ಕೆಜಿಎಫ್' ಖ್ಯಾತಿಯ ನಟಿ ಅರ್ಚನಾ ಜೋಯಿಸ್ ನಾಯಕಿ

Cinivani 1 16 jan 20
Published on

‘ಸಮಯ ಮತ್ತು ಸಾವನ್ನು ಗೆದ್ದವನು ‘ಕಾಲಾಂತಕ’. ಮಾರ್ಕಂಡೇಶ್ವರ ಪುರಾಣದಲ್ಲಿ ಇದರ ಉಲ್ಲೇಖವಿದೆ. ನಮ್ಮ ಚಿತ್ರದ ಕಥೆಗೂ ಈ ಹೆಸರಿಗೂ ಹೊಂದಾಣಿಕೆ ಆಗುವ ಕಾರಣಕ್ಕೆ ಇದೇ ಶೀರ್ಷಿಕೆ ಬಳಸಲಾಯಿತು’ ಎಂದರು ‘ಕಾಲಾಂತಕ’ ಚಿತ್ರದ ನಿರ್ದೇಶಕ ಅಂಬರೀಷ್. ಸಿನಿಮಾದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಅವರು ಈ ವಿಷಯವನ್ನು ಉಲ್ಲೇಖಿಸಿದರು. ‘ಇದು ಸಸ್ಪೆನ್ಸ್, ಥ್ರಿಲ್ಲರ್, ಕಮರ್ಷಿಯಲ್ ಸಿನಿಮಾ. ಸೆಟ್ ಹಾಕದೆ ಒಳ್ಳೊಳ್ಳೆಯ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಮಾದಕ ವಸ್ತುಗಳನ್ನು ಸಾಗಣೆ ಮಾಡುವ ವ್ಯಕ್ತಿ ಇಡೀ ಗ್ರಾಮವನ್ನೇ ಹತೋಟಿಯಲ್ಲಿ ಇಟ್ಟುಕೊಂಡಿರುತ್ತಾನೆ. ಈ ಬಗ್ಗೆ ಒಬ್ಬ ಬರಹಗಾರ್ತಿ ಪುಸ್ತಕ ಬರೆಯಲು ಮುಂದಾಗುತ್ತಾಳೆ. ಆ ಸಂದರ್ಭದಲ್ಲಿ ನಡೆಯುವ ಘಟನೆ, ಎದುರಾಗುವ ಸನ್ನಿವೇಶಗಳೇ ಸಿನಿಮಾ.

ಇಲ್ಲಿ ಕಥೆಯೇ ಹೀರೋ. ಚಿತ್ರಕಥೆ ಈ ಸಿನಿಮಾದ ಪ್ಲಸ್ ಪಾಯಿಂಟ್’ ಎಂದರು ಅಂಬರೀಷ್. ‘ಮುಂಬೈನಲ್ಲಿ ಆಕ್ಟಿಂಗ್ ಕ್ಲಾಸ್​ನಲ್ಲಿ ಕೆಲಸ ಮಾಡುತ್ತಿದ್ದ ನನಗೆ ‘ಜ್ವಲಂತ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದು’ ನಿರ್ದೇಶಕ ಅಂಬರೀಷ್. ಅದಾದ ಬಳಿಕ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾನಾ ಪಾತ್ರಗಳನ್ನು ಮಾಡಿದ್ದೇನೆ. ಇದಕ್ಕೆಲ್ಲ ಅಂಬರೀಷ್ ಅವರೇ ಕಾರಣ’ ಎಂದು ಈ ಹಿಂದೆ ಅವರು ಮಾಡಿರುವ ಸಹಾಯವನ್ನು ಸ್ಮರಿಸಿಕೊಂಡರು ನಟ ಯಶ್ ಶೆಟ್ಟಿ. ‘ನಿರ್ದೇಶಕರಿಂದ ನಾಲ್ಕೈದು ಬಾರಿ ಕಥೆ ಕೇಳಿದ್ದೆ. ತುಂಬ ಚೆನ್ನಾಗಿದ್ದರಿಂದ ಅಭಿನಯಿಸಲು ಒಪ್ಪಿಕೊಂಡೆ. ಚಿತ್ರದಲ್ಲಿ ನನ್ನದು ಬರಹಗಾರ್ತಿಯ ಪಾತ್ರ. ‘ಕಾಲಾಂತಕ’ ಎಂಬ ಪುಸ್ತಕ ಬರೆಯುವ ಸಂದರ್ಭದಲ್ಲಿ ನಡೆಯುವ ಘಟನೆಗಳೇ ಚಿತ್ರದ ಕಥಾಹಂದರ’ ಎಂದು ಹೇಳಿದರು ‘ಕೆಜಿಎಫ್: ಚಾಪ್ಟರ್ 1’ ಖ್ಯಾತಿಯ ನಟಿ ಅರ್ಚನಾ ಜೋಯಿಸ್.

ನಿರ್ಮಾಪಕ ಶಾಂತಕುಮಾರ್, ಸಂಗೀತ ನಿರ್ದೇಶಕ ಜೂಡಾಸ್ಯಾಂಡಿ, ಛಾಯಾಗ್ರಾಹಕ ಹಾಲೇಶ್, ಸಂಕಲನಕಾರ ಹರೀಶ್ ಕೊಮ್ಮೆ, ನಟರಾದ ಚೇತನ್ ಪೂಜಾರಿ, ಧಮೇಂದ್ರ ಅರಸ್, ಕಡ್ಡಿಪುಡಿ ಚಂದ್ರು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net