ಟೈಮ್​ ಅಂದ್ರೆ ನಾನು, ನಾನಂದ್ರೆ ಟೈಮ್​ ; ಸಮಯಪ್ರಜ್ಞೆಯಿಂದಲೇ ಸಮಸ್ಯೆ ಎದುರಿಸಿದ್ದ ಸುಷ್ಮಿತಾ ಸೇನ್​

Sushmita (7)
Published on

ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್​ ಸಮಯಪ್ರಜ್ಞೆಗೆ ಹೆಸರುವಾಸಿ. ಅಷ್ಟು ಕಟ್ಟುನಿಟ್ಟಾಗಿ ಶೂಟಿಂಗ್​ ಸಮಯದಲ್ಲಿ ಸಮಯಪ್ರಜ್ಞೆ ಪಾಲಿಸುತ್ತಾರೆ. ಆದರೆ, ಬಾಲಿವುಡ್​ಗೆ ಪದಾರ್ಪಣೆ ಮಾಡಿದ ಪ್ರಾರಂಭದಲ್ಲಿ ಅವರಿಗೆ ಕಟ್ಟುನಿಟ್ಟಾಗಿ ಸಮಯ ಪಾಲಿಸಿದ್ದೇ ಕೆಲವೊಮ್ಮೆ ಸಮಸ್ಯೆಗೆ ಕಾರಣವಾಗಿತ್ತಂತೆ.

ಆ ಬಗ್ಗೆ ಮೌನ ಮುರಿದಿರುವ ಸುಷ್ಮಿತಾ, "ಪ್ರಾರಂಭದಲ್ಲೇ ಸೂಪರ್​ಸ್ಟಾರ್​ ಸಲ್ಮಾನ್​ ಖಾನ್​, ಶಾರುಖ್​ ಖಾನ್​ ಜತೆ ನಟಿಸುವ ಅವಕಾಶ ದೊರೆಯಿತು. ಸ್ಟಾರ್​ಗಳ ಜತೆ ನಟಿಸುವಾಗ ಸಮಯದ ಬಗ್ಗೆ ಹೆಚ್ಚು ಗಮನಹರಿಸಬಾರದು. ಯಾವಾಗ ಬೇಕಾದರೂ ಶೂಟಿಂಗ್​ ಪ್ರಾರಂಭವಾಗಬಹುದು, ಎಷ್ಟು ತಡವಾಗಿ ಬೇಕಾದರೂ ಮುಗಿಯಬಹುದು. ಅದಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕಿತ್ತು. ಆದರೆ, ಸಮಯಕ್ಕೆ ಸರಿಯಾಗಿ ಬಂದು, ಸಮಯಕ್ಕೆ ಸರಿಯಾಗಿ ಹೊರಟುಬಿಡುತ್ತೇನೆ ಎಂದು ಮೊದಲೇ ಹೇಳಿಬಿಡುತ್ತಿದ್ದೆ. ಹೀಗಾಗಿ ಅದು ಕೆಲವರಿಗೆ ಹಿಡಿಸುತ್ತಿರಲಿಲ್ಲ. ಈಕೆಯ ವರ್ತನೆ ಸರಿಯಿಲ್ಲ, ಏನಂದುಕೊಂಡಿದ್ದಾಳೆ? ಎಂದು ಅಸಮಾಧಾನಗೊಳ್ಳುತ್ತಿದ್ದರು. ಸೆಟ್​ನಲ್ಲಿ ಯಾರೇ ಇದ್ದರೂ 6 ಗಂಟೆಗೆ ನಾನು ಅಲ್ಲಿಂದ ಹೊರಟುಬಿಡುತ್ತಿದ್ದೆ. ಆ ರೀತಿಯ ಶಿಸ್ತನ್ನು ಇವತ್ತಿನವರೆಗೂ ಪಾಲಿಸಿಕೊಂಡು ಬಂದಿದ್ದೇನೆ. ಸರಿಯಾದ ಸಮಯಕ್ಕೆ ಸೆಟ್​ಗೆ ಬರುತ್ತೇನೆ. ಹೀರೋ ಆರು ತಾಸು ತಡವಾಗಿ ಬಂದರೂ ನನ್ನ ಶೂಟಿಂಗ್​ ಮುಗಿಸಿ ಹೊರಟುಬಿಡುತ್ತೇನೆ. ಈಗ ಬಹುತೇಕ ಮಂದಿ ನನ್ನ ಸಮಯಕ್ಕೆ ಹೊಂದಿಕೊಂಡಿದ್ದಾರೆ. ಮತ್ತೊಬ್ಬರ ಕಾಲಹರಣ ಮಾಡುವುದು ಕಡಿಮೆಯಾಗಿದೆ' ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗಷ್ಟೆ ಸುಷ್ಮಿತಾ ಸೇನ್​ ಅಭಿನಯದ ಶ್ರೀಗೌರಿ ಸಾವಂತ್​ ಎಂಬ ಮಂಗಳಮುಖಿ ಜೀವನಾಧಾರಿತ 'ತಾಲಿ' ವೆಬ್​ಸರಣಿ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಸುಷ್ಮಿತಾ ನಟನೆ ಬಗ್ಗೆ ಎಲ್ಲೆಡೆ ಉತ್ತಮ ಮಾತುಗಳು ಕೇಳಿಬರುತ್ತಿವೆ.

-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net