ಐಶ್ವರ್ಯಗೆ ಹೆದರಿ ಸುಷ್ಮಿತಾ ಏನು ಮಾಡೋಕೆ ಹೊರಟಿದ್ದರು ಗೊತ್ತಾ? ... ಮಾಜಿ ಭುವನ ಸುಂದರಿಯ ರೋಚಕ ಕಹಾನಿ

Sushmita Final
Published on

ಭಾರತಕ್ಕೆ ಮೊದಲು ‘ಭುವನ ಸುಂದರಿ’ ಪಟ್ಟವನ್ನು ತಂದುಕೊಟ್ಟವರು ಸುಷ್ಮಿತಾ ಸೇನ್. ಮಾಡಲಿಂಗ್‌ನಲ್ಲಿ ಗುರುತಿಸಿಕೊಂಡು, ಕ್ರಮೇಣ ‘ಭುವನ ಸುಂದರಿ’ಯಾಗಿ, ಆ ನಂತರ ಸಿನಿಮಾ ನಟಿಯಾಗಿ ಹಲವು ಅವತಾರಗಳನ್ನು ಎತ್ತಿರುವ ಸುಷ್ಮಿತಾ ಸೇನ್, ಈಗ ತಮ್ಮ ಜೀವನದಲ್ಲಾದ ಒಂದು ಮಹತ್ವದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಹಿಂದೊಮ್ಮೆ ಐಶ್ವರ್ಯ ರೈಗೆ ಹೆದರಿ ‘ಮಿಸ್ ಇಂಡಿಯಾ’ ಪೇಜೆಂಟ್‌ನಿಂದ ಹಿಂದೆ ಸರಿಯುವುದಕ್ಕೆ ಅವರು ತೀರ್ಮಾನಿಸಿದ್ದರಂತೆ.

ಹೌದು, ಆಶ್ಚರ್ಯವಾದರೂ ಇದು ನಿಜ. 1994ರಲ್ಲಿ ‘ಮಿಸ್ ಇಂಡಿಯಾ’ ಸ್ಪರ್ಧೆಗೆ ಐಶ್ವರ್ಯ ರೈ ನಿಂತಿದ್ದರು. ಆಗಲೇ ಅವರು ಸಾಕಷ್ಟು ಜನಪ್ರಿಯರಾಗಿದ್ದರಂತೆ. ಐಶ್ವರ್ಯ ಸ್ಪರ್ಧೆಗೆ ನಿಲ್ಲುತ್ತಾರೆ ಎಂದು ಗೊತ್ತಾಗುತ್ತಿದ್ದಂತೆಯೇ, ಹಲವು ಸುಂದರಿಯರು ಹಿಂದಕ್ಕೆ ಸರಿದರಂತೆ. ಹೇಗೂ ಐಶ್ವರ್ಯಗೆ ‘ಮಿಸ್ ಇಂಡಿಯಾ’ ಪಟ್ಟ ಸಿಗುವುದರಿಂದ, ತಾವೇಕೆ ನಿಲ್ಲಬೇಕೆಂದು ಬ್ಯಾಕೌಟ್ ಆದರಂತೆ. ಅಂತಹವರಲ್ಲಿ ಸುಷ್ಮಿತಾ ಸೇನ್ ಸಹ ಒಬ್ಬರು. ಆ ಸಂದರ್ಭದಲ್ಲಿ ಅವರ ತಾಯಿ ಅಡ್ಡಬಂದು, ಮಗಳಿಗೆ ಬುದ್ಧಿ ಹೇಳಿದರಂತೆ. ಅಮ್ಮನ ಮಾತಿಗೆ ಕಟ್ಟುಬಿದ್ದು ಸುಷ್ಮಿತಾ ಸ್ಪರ್ಧೆಗೆ ನಿಂತಿದ್ದಾರೆ. ವಿಶೇಷ ಎಂದರೆ, ಆ ವರ್ಷ ಸುಷ್ಮಿತಾ ‘ಮಿಸ್ ಇಂಡಿಯಾ’ ಆದರೆ, ಐಶ್ವರ್ಯ ರನ್ನರ್ ಅಪ್ ಆಗಿದ್ದಾರೆ.

ಈ ಕುರಿತು ಮಾತನಾಡಿರುವ ಸುಷ್ಮಿತಾ, ‘ಐಶ್ವರ್ಯ ‘ಮಿಸ್ ಇಂಡಿಯಾ’ ಸ್ಪರ್ಧೆಗೆ ನಿಲ್ಲುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆಯೇ, ಸುಮಾರು 25 ಹುಡುಗಿಯರು ಹಿಂದೆ ಸರಿದರು. ನಾನು ಸಹ ಅದರಲ್ಲೊಬ್ಬಳು. ಅಷ್ಟರಲ್ಲಾಗಲೇ ಐಶ್ವರ್ಯ ಜನಪ್ರಿಯವಾಗಿದ್ದರಿಂದ, ಅವರು ಗೆಲ್ಲುತ್ತಾರೆ ಎಂಬ ನಂಬಿಕೆ ಇತ್ತು. ಆದರೆ, ಅಮ್ಮ ಬೈದರು. ಸೋಲೊಪ್ಪುವುದಾದರೂ, ಕನಿಷ್ಠ ಸ್ಪರ್ಧೆಗೆ ನಿಂತಾದರೂ ಸೋಲು. ಅದಕ್ಕಿಂತ ಮುಂಚೆಯೇ ಶರಣಾಗಬೇಡ ಎಂದರು. ಅಮ್ಮನ ಮಾತಿಗೆ ಕಟ್ಟುಬಿದ್ದು, ಸ್ಪರ್ಧೆಗೆ ನಿಂತೆ. ಐಶ್ವರ್ಯ ಪ್ರಿಲಿಮ್ ರೌಂಡ್‌ಗಳಲ್ಲಿ ಗೆದ್ದರು. ನನಗೆ ಯಾವುದೇ ಅವಕಾಶವಿಲ್ಲ ಎಂದುಕೊಂಡೆ. ಒಂದು ಹಂತದಲ್ಲಿ ಐಶ್ವರ್ಯ ಮೊದಲ ರನ್ನರ್ ಅಪ್ ಎಂದು ಘೋಷಿಸಲಾಯಿತು. ಐಶ್ವರ್ಯರಂಥ ಐಶ್ವರ್ಯನೇ ಮೊದಲ ರನ್ನರ್ ಅಪ್ ಆಗಿರುವಾಗ, ನನಗೆ ಅವಕಾಶವೇ ಇಲ್ಲ ಎಂದುಕೊಂಡೆ. ಆದರೆ, ನಾನು ವಿನ್ನರ್ ಎಂದು ಘೋಷಣೆಯಾದಾಗ, ನನಗೆ ನಂಬುವುದಕ್ಕೇ ಸಾಧ್ಯವಾಗಲಿಲ್ಲ’ ಎಂದು ನೆನಪಿಸಿಕೊಂಡಿದ್ದಾರೆ ಸುಷ್ಮಿತಾ.

ಆ ನಂತರ ಅದೇ ವರ್ಷ, ಸುಷ್ಮಿತಾ ‘ಭುವನ ಸುಂದರಿ’ಯಾದರೆ, ಐಶ್ವರ್ಯ ರೇ ‘ವಿಶ್ವ ಸುಂದರಿ’ಯಾಗಿ ಭಾರತದ ಘನತೆ ಹೆಚ್ಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net