ಸುಶಾಂತ್ ಕೊನೆಯ ಚಿತ್ರವನ್ನು ಓಟಿಟಿಯಲ್ಲಿ ಫ್ರೀಯಾಗಿ ನೋಡಿ!

Dil Bechara - Final
Published on

ಕಳೆದ ವರ್ಷ ಬಿಡುಗಡೆಯಾದ ‘ಚಿಚ್ಚೋರೇ’ ಮತ್ತು ‘ಸೊಂಚಿರಿಯಾ’ ಚಿತ್ರಗಳ ನಂತರ ಸುಶಾಂತ್ ಯಾವೊಂದು ಚಿತ್ರಗಳ ಚಿತ್ರೀಕರಣ ಸಹ ಆಗುತ್ತಿರಲಿಲ್ಲ. ಒಂದಿಷ್ಟು ಚಿತ್ರಗಳು ಮಾತುಕಥೆಯಾಗಿತ್ತಾದರೂ, ಲಾಕ್‌ಡೌನ್‌ನಿಂದಾಗಿ ಆ ಚಿತ್ರಗಳು ಸೆಟ್ಟೇರಿರಲಿಲ್ಲ. ಹಾಗಾಗಿ ಎರಡು ವರ್ಷಗಳ ಹಿಂದೆ ಪ್ರಾರಂಭವಾಗಿ, ಇನ್ನೂ ಬಿಡುಗಡೆಯಾಗಬೇಕಿರುವ ‘ದಿಲ್ ಬೇಚಾರಾ’ ಚಿತ್ರವೇ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರವಾಗಲಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಕಳೆದ ತಿಂಗಳೇ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಚಿತ್ರ ಮುಂದಕ್ಕೆ ಹೋಗಿತ್ತು. ಈಗ ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಬದಲು, ಓವರ್​ ದಿ ಟಾಪ್​ (ಓಟಿಟಿ)ಯಲ್ಲಿ ಬಿಡುಗಡೆಯಾಗಲಿದೆ. ಜುಲೈ 24ರಂದು ಈ ಚಿತ್ರವು ಡಿಸ್ನಿ-ಹಾಟ್​ಸ್ಟಾರ್​ನಲ್ಲಿ ಪ್ರೀಮಿಯರ್​ ಆಗಲಿದೆ.

ಇತ್ತೀಚಿನ ದಿನಗಳಲ್ಲಿ, ಹಾಟ್​ಸ್ಟಾರ್​ನಲ್ಲಿ ಹೊಸ ಚಿತ್ರಗಳನ್ನು ಮತ್ತು ವೆಬ್​ ಸೀರೀಸ್​ಗಳನ್ನು ನೋಡುವವರು, ಅದಕ್ಕೆ ಪ್ರತ್ಯೇಕವಾಗಿ ಚಂದ ಕಟ್ಟಬೇಕಿತ್ತು. ಸಬ್​ಸ್ಕ್ರಿಪ್ಶನ್​ ಕಟ್ಟಿದವರಿಗೆ ಮಾತ್ರ ಹೊಸ ಚಿತ್ರಗಳು ಮತ್ತು ವೆಬ್​ ಸೀರೀಸ್​ಗಳು ಲಭ್ಯವಿದ್ದವು. ಮಿಕ್ಕಂತೆ ಬೇರೆಲ್ಲಾ ವೀಕ್ಷಕರು ಹಳೆಯ ಚಿತ್ರಗಳನ್ನು ಉಚಿತವಾಗಿ ನೋಡಬಹುದಾಗಿತ್ತು. ಆದರೆ, ದಿಲ್​ ಬೇಚಾರಾ ಚಿತ್ರವು ಸುಶಾಂತ್​ ಅವರ ಕೊನೆಯ ಚಿತ್ರ ಎಂಬ ಕಾರಣದಿಂದ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಈ ಚಿತ್ರವನ್ನು ಎಲ್ಲರೂ ಉಚಿತವಾಗಿ ನೋಡುವಂತೆ ಮಾಡಿದೆ ಡಿಸ್ನಿ-ಹಾಟ್​ಸ್ಟಾರ್​. ಜುಲೈ 24ರ ನಂತರ ಚಿತ್ರವು ಸ್ಟ್ರೀಮಿಂಗ್​ ಆಗಲಿದ್ದು, ಯಾರು ಬೇಕಾದರೂ ಉಚಿತವಾಗಿ ನೋಡಬಹುದಾಗಿದೆ.

‘ದಿಲ್ ಬೇಚಾರಾ’ ಚಿತ್ರ ಎರಡು ವರ್ಷಗಳ ಹಿಂದೆಯೇ ಪ್ರಾರಂಭವಾದರೂ, ಹಲವು ವಿಘ್ನಗಳನ್ನು ಎದುರಿಸಿ, ಇದೀಗ ಬಿಡುಗಡೆಗೆ ಸಜ್ಜಾಗುತ್ತಿದೆ. 2018ರ ಜುಲೈನಲ್ಲಿ ಜಮಶೆಡ್‌ಪುರದಲ್ಲಿ ಈ ಚಿತ್ರದ ಮುಹೂರ್ತವಾಗಿತ್ತು. ಸುಶಾಂತ್ ಮತ್ತು ಹೊಸ ಹುಡುಗಿ ಸಂಜನಾ ಸಾಂಘಿ ಅಭಿನಯದ ಈ ಚಿತ್ರಕ್ಕೆ ಮುಕೇಶ್ ಛಾಬ್ರಾ ನಿರ್ದೇಶಕರು. ‘ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್‌’ ಎಂಬ ಇಂಗ್ಲೀಷ್ ಕಾದಂಬರಿಯನ್ನು ಈ ಚಿತ್ರ ಆಧರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net