

ಸುಶಾಂತ್ ಸಿಂಗ್ ರಜಪೂತ್ರಂತೆಯೇ ಕಾಣುತ್ತಾರೆ ಎನ್ನಲಾದ ಸಚಿನ್ ತಿವಾರಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ನಿರ್ಮಾಪಕರೊಬ್ಬರು ನೋಟಿಸ್ ಕಳಿಸಿದ್ದು, ಇದಕ್ಕೆ ಸಚಿನ್ ಯಾವ ಉತ್ತರ ಕೊಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.
ಸುಶಾಂತ್ ಸಿಂಗ್ ಆತ್ಮಹತ್ಯೆಯ ನಂತರ ಅವರ ಕುರಿತಾದ 'ಸೂಸೈಡ್ ಆರ್ ಮರ್ಡರ್' ಎಂಬ ಚಿತ್ರದಲ್ಲಿ ಸಚಿನ್ ತಿವಾರಿ ನಟಿಸುತ್ತಾರೆ ಎಂಬ ಸುದ್ದಿ ಕೇಳಿಬಿದ್ದಿತ್ತು. ಈ ಚಿತ್ರ ಶುರುವಾಗುವ ಮುನ್ನವೇ, ಸಚಿನ್ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಪ್ರಮುಖವಾಗಿ ನಿರ್ಮಾಪಕ ಮಾರುತ್ ಸಿಂಗ್ ಮತ್ತು ನಿರ್ದೇಶಕ ಸನೋಜ್ ಮಿಶ್ರಾ, ಸಚಿನ್ ವಿರುದ್ಧ ನೋಟೀಸ್ ಕಳಿಸಿದ್ದಾರೆ.
ಇದನ್ನೂ ಓದಿ: ಗಂಡಸರಿಗೆ ಮಕ್ಕಳಾಗೊ ಕಾಲ ಬಂತಯ್ಯ …
ಇದಕ್ಕೂ ಮುನ್ನ ಸಚಿನ್ ಅಭಿನಯದಲ್ಲಿ ಮಾರುತ್ ಮತ್ತು ಸನೋಜ್ ಒಂದು ಚಿತ್ರ ಮಾಡಬೇಕು ಎಂದು ಹೊರಟಿದ್ದರಂತೆ. ಅದು ಸುಶಾಂತ್ ಮತ್ತು ಬಾಲಿವುಡ್ನಲ್ಲಿ ಚಾಲ್ತಿಯಲ್ಲಿರುವ ನೆಪೋಟಿಸಂ (ಸ್ವಜನಪಕ್ಷಪಾತ) ಕುರಿತಾದ ಚಿತ್ರ. ಈ ಚಿತ್ರದಲ್ಲಿ ನಟಿಸುವುದಕ್ಕೆ ಸಚಿನ್ ಸಹ ಒಪ್ಪಿಕೊಂಡಿದ್ದರಂತೆ.
ಆದರೆ, ಅದೇನಾಯಿತೋ ಗೊತ್ತಿಲ್ಲ. ಸಚಿನ್ ಸದ್ದಿಲ್ಲದೆ ಈ ಕಥೆಯನ್ನು ಇನ್ನೊಬ್ಬ ನಿರ್ಮಾಪಕರಿಗೆ ಲೀಕ್ ಮಾಡಿ, ಅವರು, 'ಸೂಸೈಡ್ ಆರ್ ಮರ್ಡರ್' ಚಿತ್ರವನ್ನು ಘೋಷಿಸಿಬಿಟ್ಟಿದ್ದಾರೆ. ಸುಶಾಂತ್ ಕುರಿತು ಸಚಿನ್ ಅಭಿನಯದಲ್ಲಿ ಚಿತ್ರ ಮಾಡಬೇಕು ಎಂದು ಮಾರುತ್ ಮತ್ತು ಸನೋಜ್ ಕಾದಿದ್ದಷ್ಟೇ ಬಂತು. ಆದರೆ, ಅಷ್ಟರಲ್ಲಿ ಬೇರೆ ಯಾರೋ ತಯಾರಿ ನಡೆಸಿಬಿಟ್ಟಿದ್ದರು.
ಇದನ್ನೂ ಓದಿ: ಕನ್ನಡದಲ್ಲಿ ಮಿಂಚು ಹರಿಸಲಿದ್ದಾನೆ ಮಲಯಾಳಂ ಮುರಳಿ!
ಹೇಗೆ ಎಂದು ಹುಡುಕಹೊರಟಾಗ, ಆ ನಿರ್ಮಾಪಕರಿಗೆ ಸಚಿನ್ ತಿವಾರಿಯೇ ಕಥೆ ಹೇಳಿರುವ ರಹಸ್ಯ ಹೊರಬಿದ್ದಿದೆ. ಈ ವಿಷಯದ ಕುರಿತಾಗಿ ಸಚಿನ್ಗೆ ಫೋನ್ ಮಾಡಿದರೆ, ಅವರು ಫೋನ್ ಎತ್ತುತ್ತಿಲ್ಲವಂತೆ. ಇನ್ನು ಕಾದು ಪ್ರಯೋಜನವಿಲ್ಲ ಎಂದು ನೋಟಿಸ್ ಕಳಿಸಿದರೆ, ಒಂದು ತಿಂಗಳಾದರೂ ಅದಕ್ಕೂ ಉತ್ತರವಿಲ್ಲವಂತೆ.
ಈಗ ಮುಂದೇನು ಮಾಡಬಹುದು ಎಂದು ಗೊತ್ತಾಗದೆ ಮಾರುತ್ ಮತ್ತು ಸನೋಜ್ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಈ ಕಡೆ ಕಥೆಯೂ ಹೋಯಿತು, ಆ ಕಡೆ ಹೀರೋ ಸಹ ಸಿಗುತ್ತಿಲ್ಲ. ಈ ಪ್ರಕರಣ ಯಾವ ತಿರುವು ಪಡೆಯುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ.