ಮತ್ತೊಮ್ಮೆ ಡಬ್ಬಲ್​ ರೋಲ್​ನಲ್ಲಿ ಸೂರ್ಯ ... ಯಾವ ಚಿತ್ರ? ಏನು ಕಥೆ?

Surya Final
Published on

ತಮ್ಮ ಪ್ರತೀ ಚಿತ್ರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿರುವವರು ನಟ ಸೂರ್ಯ. ಇದೀಗ ಅವರು ತಮ್ಮ ಹೊಸ ಚಿತ್ರದಲ್ಲಿ ಡಬ್ಬಲ್​ ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಸೂರ್ಯಗೆ ಹೊಸದೇನಲ್ಲ. ಈಗಾಗಲೇ ಅವರು ಏಳು ಚಿತ್ರಗಳಲ್ಲಿ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಶಃ ಇತ್ತೀಚಿನ ವರ್ಷಗಳಲ್ಲಿ ಮತ್ತು ತಮ್ಮ ಸಮಕಾಲೀನರಲ್ಲಿ ಅತೀ ಹೆಚ್ಚು ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿರುವವರೆಂದರೆ ಅದು ಸೂರ್ಯ ಮಾತ್ರ ಎಂದು ಕಾಲಿವುಡ್​ನಲ್ಲಿ ಹೇಳಲಾಗುತ್ತದೆ.

ಎರಡು ವರ್ಷಗಳ ಹಿಂದೆ ಬಿಡುಗಡೆಯಾದ, ತಮ್ಮದೇ ನಿರ್ಮಾಣದ '24' ಎಂಬ ಚಿತ್ರದಲ್ಲಿ ಸೂರ್ಯ ಅಪ್ಪ-ಮಗನಾಗಿ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ಗೌತಮ್​ ಮೆನನ್​ ನಿರ್ದೇಶನದ 'ವಾರನಂ ಆಯಿರಂ' ಚಿತ್ರದಲ್ಲಿ ಸೂರ್ಯ ತಂದೆ-ಮಗನಾಗಿದ್ದರು. ಈಗ 'ವಾಡಿವಾಸಲ್​' ಎಂಬ ಹೊಸ ಚಿತ್ರದಲ್ಲೂ ಸೂರ್ಯ ಅಪ್ಪ-ಮಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

'ವಾಡಿವಾಸಲ್​' ಚಿತ್ರವನ್ನು ನಿರ್ದೇಶಿಸುತ್ತಿರುವುದು ತಮಿಳಿನ ಜನಪ್ರಿಯ ನಿರ್ದೇಶಕ ವೆಟ್ರಿಮಾರನ್​. ಕಳೆದ ವರ್ಷ ಬಿಡುಗಡೆಯಾದ 'ಅಸುರನ್​' ಮೂಲಕ ಇನ್ನಷ್ಟು ಜನಪ್ರಿಯತೆ ಮತ್ತು ಯಶಸ್ಸು ತಮ್ಮದಾಗಿಸಿಕೊಂಡ ವೆಟ್ರಿಮಾರನ್​, ಸೂರ್ಯ ಜತೆಗೆ ಕೆಲಸ ಮಾಡುವುದಾಗಿ ಕಳೆದ ವರ್ಷವೇ ಸುದ್ದಿಯಾಗಿತ್ತು. ಆದರೆ, ಈ ಬಗ್ಗೆ ಅಧಿಕೃತವಾಗಿ ಪ್ರಕಟಣೆ ಹೊರಬಿದ್ದಿರಲಿಲ್ಲ.

ಈಗ ಈ ಸುದ್ದಿ ನಿಜವಾಗಿದ್ದು, 'ವಾಡಿವಾಸಲ್​' ಚಿತ್ರದಲ್ಲಿ ಸೂರ್ಯ ಅವರನ್ನು ನಿರ್ದೇಶಿಸುತ್ತಿದ್ದಾರೆ ವೆಟ್ರಿಮಾರನ್​. ಜಲ್ಲಿಕಟ್ಟು ಹಿನ್ನೆಲೆಯಲ್ಲಿ ನಡೆಯುವ ಕಥೆಯಲ್ಲಿ ಸೂರ್ಯ, ಅಪ್ಪ-ಮಗನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಪ್ಪ, ಒಂದು ಗೂಳಿಯನ್ನು ಪಳಗಿಸುವುದಕ್ಕೆ ಹೋಗಿ, ಪ್ರಾಣ ಕಳೆದುಕೊಳ್ಳುತ್ತಾನಂತೆ. ಆ ನಂತರ ಮಗ ಏನು ಮಾಡುತ್ತಾನೆ ಎನ್ನುವುದು ಚಿತ್ರದ ಕಥೆ.

ಈ ಚಿತ್ರಕ್ಕೆ ಮೊದಲಿಗೆ ಅಪ್ಪನ ಪಾತ್ರಕ್ಕೆ ಸತ್ಯರಾಜ್​ ಮತ್ತು ರಾಜಕಿರಣ್​ ಅವರನ್ನು ಸಂಪರ್ಕಿಸಲಾಗಿತ್ತಂತೆ. ಆದರೆ, ಕಾರಣಾಂತರಗಳಿಂದ, ಅವರಿಬ್ಬರೂ ಚಿತ್ರದಲ್ಲಿ ನಟಿಸುತ್ತಿಲ್ಲ. ತಂದೆ ಪಾತ್ರವನ್ನು ಯಾರಿಂದ ಮಾಡಿಸುವುದು ಎಂದು ಚಿತ್ರತಂಡದವರು ತಲೆ ಕೆಡಿಸಿಕೊಂಡು ಕೂತಿದ್ದಾಗ, ಆ ಪಾತ್ರವನ್ನು ಸೂರ್ಯ ಅವರೇ ಮಾಡುವುದಕ್ಕೆ ಮುಂದೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ‘

ಕರೊನಾ ಹಾವಳಿ ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ, ಈ ಚಿತ್ರದ ಚಿತ್ರೀಕರಣ ಶುರುವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net