

ಬೆಂಗಳೂರು: ರವಿಚಂದ್ರನ್ ನಿರ್ದೇಶಿಸಿ, ನಟಿಸಿದ್ದ ‘ಅಪೂರ್ವ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟಿ ಅಪೂರ್ವಗೆ 2025ರ ವರ್ಷ ಮಹತ್ವದಾಗಿರಲಿದೆ. ಯಾಕೆಂದರೆ, ಅವರ ನಟನೆಯ ನಾಲ್ಕು ಚಿತ್ರಗಳು ಈ ವರ್ಷ ತೆರೆ ಕಾಣಲಿದ್ದು, ಅವುಗಳಲ್ಲಿ ಮೊದಲ ಸಿನಿಮಾ ‘ಸೂರಿ ಲವ್ಸ್ ಸಂಧ್ಯಾ’ ಇಂದು ರಿಲೀಸ್ ಆಗುತ್ತಿದೆ. ಯಾದವ ರಾಜ್ ನಿರ್ದೇಶನದ ಈ ಚಿತ್ರದಲ್ಲಿ ಅಪೂರ್ವ, ಕಾಶೀನಾಥ್ ಪುತ್ರ ಅಭಿಮನ್ಯು ಕಾಶೀನಾಥ್‌ಗೆ ಜೋಡಿಯಾಗಿದ್ದಾರೆ. ಈ ಚಿತ್ರದ ಪಯಣದ ಬಗ್ಗೆ, ‘ಮೊದಲಿಗೆ ಇಮ್ರಾನ್ ಅವರಿಂದ ಈ ಸಿನಿಮಾ ತಂಡ ಪರಿಚಯವಾಯಿತು. ಅವರು ನಿರ್ದೇಶಕ ಯಾದವ ರಾಜ್ ಪರಿಚಯಿಸಿದರು. ನಿರ್ದೇಶಕರು ಕಥೆ ಹೇಳಿದಾಗಲೇ ನನಗೆ ಇಷ್ಟವಾಯಿತು. ಟೈಟಲ್‌ನಲ್ಲೇ ‘ಸೂರಿ ಲವ್ಸ್ ಸಂಧ್ಯಾ’ ಎಂದು ನಾಯಕ ಮತ್ತು ನಾಯಕಿಯ ಹೆಸರಿರುವಾಗ, ನನ್ನ ಪಾತ್ರಕ್ಕೆ ಸ್ಪೇಸ್ ಇದೆ ಎಂದು ಒಪ್ಪಿಕೊಂಡೆ. ಇಲ್ಲಿ ನನ್ನದು ಸಂಧ್ಯಾ ಎಂಬ ಕಾಲೇಜು ಹುಡುಗಿ ಪಾತ್ರ. ಆಕೆ ಅಗರ್ಭ ಶ್ರೀಮಂತ ಕುಟುಂಬದವಳು. ಆದರೆ, ಅನಾಥೆ. ಅಣ್ಣ ಇರುತ್ತಾನೆ. ಈ ನಡುವೆ ಮಧ್ಯಮ ವರ್ಗದ ಹುಡುಗ ಸೂರಿ ಪರಿಚಯವಾಗಿ, ಆತನ ಮೇಲೆ ಪ್ರೀತಿ ಆಗುತ್ತದೆ. ಉಳಿದ ಕಥೆ ಸಿನಿಮಾದಲ್ಲಿ ವೀಕ್ಷಿಸಬೇಕು. ಮೊದಲರ್ಧದಲ್ಲಿ ಎಂಟರ್‌ಟೈನ್‌ಮೆಂಟ್ ಇದ್ದು, ಕ್ಲೈಮ್ಯಾಕ್ಸ್‌ನಲ್ಲಿ ಅಬ್ಬರದಿಂದ ಕೂಡಿರಲಿದೆ. ಕ್ಲೈಮ್ಯಾಕ್ಸ್ ಕೇಳಿ, ಅಮ್ಮ ಪಾತ್ರ ಮಾಡುವುದು ಬೇಡ ಅಂದಿದ್ದರು. ಆದರೆ, ಇಂತಹ ಕಥೆಗಳನ್ನೇ ಮಾಡಿದಾಗ ನಾನು ಗುರುತಿಸಿಕೊಳ್ಳಬಹುದು ಎನ್ನಿಸಿತು. ಇನ್ನು, ಅಭಿಮನ್ಯು ಜತೆ ಕೆಲಸ ಮಾಡಿದ ಖುಷಿಯಿದೆ. ಒಮ್ಮೊಮ್ಮೆ ಶೂಟಿಂಗ್ ಸ್ಥಳದಲ್ಲೇ ಡೈಲಾಗ್ ಬದಲಿಸಿಬಿಡುತ್ತಿದ್ದರು. ಆಗ ಇಬ್ಬರು ರಿಹರ್ಸಲ್ ಮಾಡುತ್ತಿದ್ದೆವು. ಇಡೀ ತಂಡ ನಮಗೆ ಬೆಂಬಲವಾಗಿ ನಿಂತಿತ್ತು. ಇಂದು ಸಿನಿಮಾ ರಿಲೀಸ್ ಆಗುತ್ತಿದ್ದು, ಪ್ರೇಕ್ಷಕರ ರೆಸ್ಪಾನ್ಸ್ ನೋಡಲು ತುಂಬಾ ಕಾತುರಳಾಗಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ.
ಉಪ್ಪಿ ಶಹಬ್ಬಾಶ್‌ಗಿರಿ: ‘ಸೂರಿ ಲವ್ಸ್ ಸಂಧ್ಯಾ’ ಈಗಾಗಲೇ ದುಬೈನಲ್ಲಿ ಪ್ರೀಮಿಯರ್ ಕಂಡಿದೆ. ನಟ, ನಿರ್ದೇಶಕ ಉಪೇಂದ್ರ ಸಿನಿಮಾ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕೆಲ ದಿನಗಳ ಹಿಂದಷ್ಟೇ ಟ್ರೇಲರ್ ಬಿಡುಗಡೆ ಮಾಡಿ ಅಭಿ, ಅಪೂರ್ವಾಗೆ ಶುಭ ಕೋರಿದ್ದಾರೆ. ‘ಉಪೇಂದ್ರ ಸರ್ ಟ್ರೇಲರ್ ಬಿಡುಗಡೆ ಮಾಡಿರುವುದು ಖುಷಿಯಾಗಿದೆ. ನಮಗಿಂತ ಮೊದಲು ಅವರೇ ಸಿನಿಮಾ ನೋಡಿದ್ದಾರೆ. ನನ್ನ ಪಾತ್ರದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿ, ಮನೋಜ್ಞವಾಗಿ ಅಭಿನಯಿಸಿದ್ದೀರಿ ಎಂದರು. ಹಾಗೆಯೇ ಸೀಟ್ ತುದಿಯಲ್ಲಿ ಕೂರಿಸುವ ಈ ಕಥೆ ಎಲ್ಲರಿಗೂ ಇಷ್ಟವಾಗುತ್ತದೆ’ ಎಂದು ಅಪೂರ್ವ ಹೇಳುತ್ತಾರೆ.
ಬ್ಯಾಕ್ ಟು ಬ್ಯಾಕ್ ಬಿಜಿ: ‘ಅಪೂರ್ವ’ ಬಳಿಕ ರವಿಚಂದ್ರನ್ ಮತ್ತು ಅಪೂರ್ವ ಮತ್ತೆ ‘ಗೌರಿಶಂಕರ’ ಮೂಲಕ ಒಂದಾಗಿದ್ದು, ‘ಈ ಚಿತ್ರದಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ. ರವಿಚಂದ್ರನ್ ಸರ್ ಪತ್ನಿ ಪಾತ್ರ ನನ್ನದು. ನನಗೆ ‘ಅಪೂರ್ವ’ದಲ್ಲಿ ನಟನೆ ಕಲಿಸಿದವರು ರವಿ ಸರ್. ಈಗ ಆ್ಯಕ್ಟಿಂಗ್ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಜತೆಗೆ ಚಂದನ್ ಶೆಟ್ಟಿ ಅಭಿನಯದ ‘ಸೂತ್ರಧಾರಿ’ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ಸಕಲೇಶಪುರದಲ್ಲಿ ‘ನಾ ನಿನ್ನ ಬಿಡಲಾರೆ ೋಸ್ಟ್ 2.0’ ಶೂಟಿಂಗ್‌ನಲ್ಲಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ ಅಪೂರ್ವ.