ಶಿವರಾತ್ರಿಗೆ ನಟ ರಾಕ್ಷಸನ ರುದ್ರ ತಾಂಡವ: ಸೂರಿ-ಡಾಲಿ ಕಾಂಬಿನೇಶನ್ ಪಾಪ್ ಕಾರ್ನ್ ಬಿಡುಗಡೆ

Monkey Popcorn
Published on

ಬೆಂಗಳೂರು: ಸೂರಿ ಮತ್ತು ಡಾಲಿ ಧನಂಜಯ ಕಾಂಬಿನೇಶನ್​ನ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಶಿವರಾತ್ರಿ ಅಂದ್ರೆ ಫೆ 21ಕ್ಕೆ ರಿಲೀಸ್ ಆಗುತ್ತಿದೆ. ಟಗರು ಚಿತ್ರದ ನಂತರ ಡಾಲಿ ಎಂದೇ ಫೇಮಸ್ ಆದ ಧನಂಜಯ ಸೂರಿ ಜತೆ ಮಾಡುತ್ತಿರುವ ಎರಡನೇ ಚಿತ್ರ ಇದಾದ್ದರಿಂದ ಒಂದಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಈ ಚಿತ್ರಕ್ಕೆ ಚರಣ್​ರಾಜ್ ಸಂಗೀತ ನೀಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಮಾದೇವ ಹಾಡನ್ನು ಒಂದು ಮಿಲಿಯನ್ ಜನ ನೋಡಿದ್ದಾರೆ.

‘ರೌಡಿಯೊಬ್ಬನ 6 ವರ್ಷದ ಜರ್ನಿಯನ್ನು ಈ ಚಿತ್ರದಲ್ಲಿ ಹೇಳಲು ಸೂರಿ ಅವರು ಪ್ರಯತ್ನ ಪಟ್ಟಿದ್ದಾರೆ. ರೌಡಿಸಂ ಒಳಗೆ ಬೇರೆಯದ್ದೇ ಲೋಕ ಇದೆ, ಅದನ್ನು ನಿರ್ದೇಶಕರು ಇಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಅದಕ್ಕೆ ಸಂಗೀತವೂ ಸಾಥ್ ನೀಡಿದೆ. ನನಗೆ ಇದು ಎರಡು ವರ್ಷಗಳ ಜರ್ನಿ, ಈ ಎರಡು ವರ್ಷಗಳಲ್ಲಿ ಸೀನನೊಳಗೆ ಮುಳುಗಿ ಹೋಗಿದ್ದೆ. ಈಗೇನಿದ್ದರೂ ಪ್ರೇಕ್ಷಕರು ಚಿತ್ರವನ್ನು ಮೆಚ್ಚಿಕೊಳ್ಳಬೇಕಿದೆ. ಟೀಸರ್ ಮತ್ತು ಹಾಡಿಗೆ ಜನ ತೋರಿಸಿರುವ ಪ್ರತಿಕ್ರಿಯೆಯನ್ನು ನೋಡಿದರೆ ಜನರಿಗೂ ಈ ಚಿತ್ರ ಇಷ್ಟವಾಗುತ್ತದೆ’ಎನ್ನುತ್ತಾರೆ ನಟ ಧನಂಜಯ. ಸುಧೀರ್ ಅರಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶೇಖರ್ ಸಿನಿಮಾಟೋಗ್ರಫಿ ಮಾಡಿದ್ದಾರೆ.

ಇನ್ನು ರಿಲೀಸ್ ಡೇಟ್ ಅನೌನ್ಸ್ ಆದ ಕೂಡಲೇ ಧನಂಜಯ ಶಿವರಾತ್ರಿಯಿಂದ ನಟರಾಕ್ಷಸನ ರುದ್ರ ತಾಂಡವ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಧನಂಜಯಗೆ ಜೋಡಿಯಾಗಿ ಅಮೃತಾ ಅಯ್ಯಂಗರ್, ನಿವೇದಿತಾ, ಸಪ್ತಮಿ ಉಮೇಶ್ ನಟಿಸಿದ್ದಾರೆ. ಜಾಕಿ ಭಾವನ ಅವರ ಪತಿ ನವೀನ್ ಸಹ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಕಾಕ್ರೋಚ್ ಸುಧೀ ನೆಗೆಟಿವ್ ಶೇಡ್​ನಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net