

ತಿರುವನಂತಪುರ: ಕರೊನಾ ವೈರಸ್ ಸೋಂಕು ತಗುಲದಂತೆ ರೋಡಿಗೆ ಇಳಿಯದೇ ಇರಲು ಸರ್ಕಾರ ಎಷ್ಟೊಂದು ಎಚ್ಚರಿಕೆ ನೀಡುತ್ತಿದ್ದರೂ, ಹಲವಾರು ಗಂಡಸರು ಅದನ್ನು ಉಲ್ಲಂಘನೆ ಮಾಡುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಮಲಯಾಳಿ ನಟ ಸೂರಜ್ ವೆಂಜರಮೂಡು, ಮನೆಯಲ್ಲಿನ ಗಂಡಸರನ್ನು ನಿಯಂತ್ರಿಸಲು ಹೆಣ್ಣುಮಕ್ಕಳಿಂದ ಮಾತ್ರ ಸಾಧ್ಯ ಎಂದಿದ್ದಾರೆ.
ಈ ಕುರಿತು ವೀಡಿಯೋ ಮೂಲಕ ಸಂದೇಶ ನೀಡಿರುವ ನಟ, ನಿಮ್ಮ ಗಂಡನ ಗುಣದ ಬಗ್ಗೆ ನಿಮಗೆ ಚೆನ್ನಾಗಿ ಅರಿವು ಇರುತ್ತದೆ. ಹೆಚ್ಚಿನ ಗಂಡಸರಿಗೆ ಮನೆಯಲ್ಲಿ ಕೂರುವುದೆಂದರೆ ಆಗುವುದಿಲ್ಲ. ಆದ್ದರಿಂದ ರೋಡಿಗೆ ಇಳಿಯಲು ಏನಾದರೂ ನೆಪ ಹುಡುಕುತ್ತಲೇ ಇರುತ್ತಾರೆ. ಆದರೆ ಅವರನ್ನು ಹೇಗಾದರೂ ಮಾಡಿ ಮನೆಯಲ್ಲಿಯೇ ಇರಿಸಿಕೊಳ್ಳಿ. ರೋಡಿಗೆ ಹೋದರೆ ಆಗುವ ಅನಾಹುತಗಳ ಬಗ್ಗೆ ಎಚ್ಚರಿಸಿ. ಇದು ಕೇವಲ ನಿಮ್ಮಿಂದ ಮಾತ್ರ ಸಾಧ್ಯ’ ಎಂದಿದ್ದಾರೆ.
ಕುಟುಂಬದ ಜವಾಬ್ದಾರಿ ಹೆಣ್ಣುಮಕ್ಕಳಿಗೆ ಹೆಚ್ಚಾಗಿ ಇರುತ್ತದೆ. ಆದ್ದರಿಂದ ನಿಮ್ಮ ಕುಟುಂಬದ ಸದಸ್ಯರನ್ನು ಕಾಪಾಡಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ. ರಸ್ತೆಯ ಮೇಲೆ ಓಡಾಡದಂತೆ ಆರೋಗ್ಯ ಇಲಾಖೆ ಈಗಾಗಲೇ ಸಾಕಷ್ಟು ಎಚ್ಚರಿಕೆಯನ್ನು ನೀಡಿದ್ದರೂ, ಅದನ್ನು ಕಡೆಗಣಿಸುವುದು ಅಲ್ಲಲ್ಲಿ ಕಾಣಿಸುತ್ತಿದೆ. ಅದರಲ್ಲಿ ಹೆಚ್ಚಿನವರು ಗಂಡಸರೇ ಆಗಿದ್ದಾರೆ. ಆದ್ದರಿಂದ ಕುಟುಂಬದ ಹಿತದೃಷ್ಟಿಯಿಂದ ಮಹಿಳೆಯರೇ ಈಗ ಮುತುವರ್ಜಿ ವಹಿಸಿ, ಗಂಡಸರನ್ನು ನಿಯಂತ್ರಿಸಬೇಕಿದೆ ಎಂದು ಅವರು ವೀಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)