ಧನುಷ್​ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ ನಯನತಾರಾ ಮೇಲೆ ಸೈಬರ್​ ದಾಳಿ! ಅಶ್ಲೀಲ ಪದಗಳ ಬಳಕೆ | Nayanthara

Nayanthara
Published on

ಚೆನ್ನೈ: ಸದ್ಯ ತಮಿಳುನಾಡು ಸಿನಿರಂಗದಲ್ಲಿ ಲೇಡಿ ಸೂಪರ್​​ಸ್ಟಾರ್​ ನಯನತಾರಾ ( Nayanthara ) ಮತ್ತು ಸೂಪರ್​ಸ್ಟಾರ್​ ಧನುಷ್ ವಿಚಾರ ಬಹಳ ಚರ್ಚೆಯಾಗುತ್ತಿದೆ.​ ಧನುಷ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕವಾಗಿ ಟೀಕಿಸಿದ ಬಳಿಕ ನಯನತಾರಾ ವಿರುದ್ಧ ತೀವ್ರ ಸೈಬರ್ ದಾಳಿ ನಡೆದಿದೆ. ಧನುಷ್‌ ಅವರನ್ನು ಬೆಂಬಲಿಸಿ ಅನೇಕ ಹ್ಯಾಷ್‌ಟ್ಯಾಗ್‌ಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ.

ಇನ್ನು ಧನುಷ್​​ ಮತ್ತು ನಯನಾ ನಡುವಿನ ವಿವಾದಕ್ಕೆ ಕಾರಣ ಏನೆಂದರೆ, ನಯನಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರ ಮದುವೆಯ ಸಾಕ್ಷ್ಯಚಿತ್ರವೇ ಕಾರಣ. ಇದೇ ನವೆಂಬರ್​ 18ರಂದು 'ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್' ಹೆಸರಿನಲ್ಲಿ ಮದುವೆಯ ಸಾಕ್ಷ್ಯಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದರ ನಡುವೆಯೇ ನಯನತಾರಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪತ್ರವೊಂದನ್ನು ಪೋಸ್ಟ್​ ಮಾಡುವ ಮೂಲಕ ವಿವಾದದ ಕಿಚ್ಚು ಹೊತ್ತಿಸಿದ್ದಾರೆ.

ವಿಘ್ನೇಶ್​ ಶಿವನ್​ ನಿರ್ದೇಶನದ ನಾನುಮ್​ ರೌಡಿ ಥಾನ್​ ಸಿನಿಮಾದಲ್ಲಿ ನಯನತಾರಾ ಮತ್ತು ವಿಜಯ್​ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದರು. ನಟ ಧನುಷ್​ ಅವರು ಈ ಚಿತ್ರವನ್ನು ನಿರ್ಮಿಸಿದರು. ಹೀಗಾಗಿ ಈ ಚಿತ್ರದ ಕೆಲವು ಭಾಗಗಳನ್ನು ಸಾಕ್ಷ್ಯಚಿತ್ರದಲ್ಲಿ ಸೇರಿಸಲು ಎನ್‌ಒಸಿ ಪಡೆಯಲು ಎರಡು ವರ್ಷ ಕಾದಿದ್ದೆ ಎಂದು ನಯನತಾರಾ ಟೀಕಿಸಿದ್ದಾರೆ.

ಯಾವಾಗ ನಯನತಾರಾ ಧನುಷ್​ ವಿರುದ್ಧ ಬಹಿರಂಗ ಪತ್ರ ಬರೆದರೋ ಅದರ ಬೆನ್ನಲ್ಲೇ ನಯನತಾರಾ ಅವರನ್ನು ಟೀಕಿಸಿ ಮತ್ತು ಧನುಷ್ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ. #CharacterlessLadyNAYANTHARA ಹ್ಯಾಟ್​ಟ್ಯಾಗ್​ನೊಂದಿಗೆ ನಯನತಾರಾ ವಿರುದ್ಧ ಧನುಷ್​ ಅಭಿಮಾನಿಗಳು ಸಮರ ಸಾರಿದ್ದಾರೆ.

ಇನ್ನು ಧನುಷ್ ಜೊತೆ ನಟಿಸಿರುವ ಪಾರ್ವತಿ ತಿರುವೋಥ್, ಅನುಪಮಾ ಪರಮೇಶ್ವರನ್, ಐಶ್ವರ್ಯಾ ಲಕ್ಷ್ಮಿ, ನಜ್ರಿಯಾ ಮತ್ತು ಶ್ರುತಿ ಹಾಸನ್ ಮುಂತಾದ ನಟಿಯರು ನಯನತಾರಾಗೆ ಬೆಂಬಲ ಸೂಚಿಸಿದ್ದಾರೆ. ಆದರೆ, ಈ ವಿವಾದದ ಬಗ್ಗೆ ಧನುಷ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ ನಿನ್ನೆಯಿಂದ ನಯನತಾರಾ ವಿರುದ್ಧ ಜಾಲತಾಣದಲ್ಲಿ ನೆಗೆಟಿವ್​ ಪ್ರಚಾರ ನಡೆಯುತ್ತಲೇ ಇದೆ.

ನಯನತಾರಾ ಪತ್ರದಲ್ಲೇನಿದೆ?

ತಪ್ಪುಗಳನ್ನು ತಿದ್ದಿಕೊಳ್ಳಲು ಇದೊಂದು ಮುಕ್ತ ಪತ್ರ. ನಿಮ್ಮಂತಹ ಒಳ್ಳೆಯ ನಟ ಇದನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಸಿನಿಮಾ ನನ್ನಂಥವರ ಬದುಕಿಗಾಗಿ ಹೋರಾಟ. ಸಿನಿಮಾಕ್ಕೆ ಸಂಬಂಧವೇ ಇಲ್ಲದ ಕುಟುಂಬದಿಂದ ಬಂದು ಸ್ವಯಂ ಹೋರಾಟದಿಂದ ಬದುಕು ಕಟ್ಟಿಕೊಂಡ ಮಹಿಳೆ. ನನ್ನ ಸಾಕ್ಷ್ಯಚಿತ್ರದ ಬಿಡುಗಡೆಯನ್ನು ನಾನು ಮಾತ್ರವಲ್ಲ, ನನ್ನ ಅಭಿಮಾನಿಗಳೂ ನಿರೀಕ್ಷಿಸಿದ್ದರು. ನನ್ನ ಮತ್ತು ನನ್ನ ಸಂಗಾತಿಯ ಮೇಲಿನ ನಿಮ್ಮ ಸೇಡು, ನಮಗೆ ಮಾತ್ರವಲ್ಲ, ಈ ಯೋಜನೆಯಲ್ಲಿ ಕೆಲಸ ಮಾಡಿದ ಜನರ ಮೇಲೂ ಪರಿಣಾಮ ಬೀರುತ್ತದೆ. ಸಾಕ್ಷ್ಯಚಿತ್ರವು ಚಲನಚಿತ್ರಗಳ ಸ್ಮರಣಿಕೆಗಳನ್ನು ಸಹ ಒಳಗೊಂಡಿದೆ, ಪ್ರಮುಖ ಚಲನಚಿತ್ರ 'ನಾನುಮ್ ರೌಡಿ ಥಾನ್' ಅನ್ನು ಒಳಗೊಂಡಿದೆ.

ನಿಮ್ಮ NOC ಪಡೆಯಲು ಎರಡು ವರ್ಷಗಳ ದೀರ್ಘ ಕಾದೆ. ಚಿತ್ರದ ಹಾಡುಗಳು ಅಥವಾ ಕೆಲ ದೃಶ್ಯಗಳನ್ನು ಬಳಸಲು ಬಹಳಷ್ಟು ವಿನಂತಿಗಳನ್ನು ಮಾಡಿಕೊಂಡಾಗ ಅನೇಕ ಬಾರಿ ನಿರಾಕರಿಸಲಾಯಿತು. ಇದರಿಂದ ನನಗೆ ತೀವ್ರ ನೋವಾಯಿತು. ನಮ್ಮ ಮೇಲಿನ ವೈಯಕ್ತಿಕ ದ್ವೇಷವನ್ನು ಈಡೇರಿಸಿಕೊಳ್ಳುವುದು ನೋವಿನ ಸಂಗತಿಯಾಗಿದೆ. ಸಾಕ್ಷ್ಯಚಿತ್ರದ ಟ್ರೇಲರ್ ಹೊರಬಂದ ನಂತರ ನಿಮ್ಮ ವಕೀಲರಿಂದ ನೋಟಿಸ್​ ನೋಡಿ ಆಘಾತಕ್ಕೊಳಗಾಗಿದ್ದೇನೆ. ಕೇವಲ ಮೂರು ಸೆಕೆಂಡ್​ ವಿಡಿಯೋಗೆ ಹತ್ತು ಕೋಟಿ ರೂಪಾಯಿ ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿದ್ದೀರಿ. ಇದು ನಿಮ್ಮ ಗುಣವನ್ನು ತೋರಿಸುತ್ತದೆ. ನಿಮ್ಮ ಮುಗ್ಧ ಅಭಿಮಾನಿಗಳ ಮುಂದೆ ಆಡಿಯೋ ಲಾಂಚ್‌ಗಳ ವೇದಿಕೆಯಲ್ಲಿ ನೀವು ನಡೆದುಕೊಳ್ಳುವ ಅರ್ಧದಷ್ಟು ಒಳ್ಳೆಯ ವ್ಯಕ್ತಿಯಾಗಿರಲೆಂದು ನಾನು ಬಯಸುತ್ತೇನೆ. ಆದರೆ ನೀವು ಹೇಳುವುದು ಒಂದು ಮತ್ತು ನಡೆದುಕೊಳ್ಳುವ ರೀತಿ ಇನ್ನೊಂದು.

ಸಿನಿಮಾ ಸೆಟ್‌ನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಜೀವನವನ್ನು ನಿಯಂತ್ರಿಸುವ ನಿರ್ಮಾಪಕ ಸರ್ವಾಧಿಕಾರಿಯಾಗಬಹುದೇ? ನಿಮ್ಮ ನಿರಾಕರಣೆಯನ್ನು ನ್ಯಾಯಾಲಯದಲ್ಲಿ ನೀವು ಸಮರ್ಥಿಸಬಹುದು. ಅದರಲ್ಲಿ ನೈತಿಕ ಅಂಶವೂ ಇದೆ ಎಂದು ನನಗೆ ನೆನಪಿಸುತ್ತದೆ. ಆದರೆ, ದೇವರ ನ್ಯಾಯಾಲಯ ಒಂದಿದೆ. ಒಬ್ಬ ಮುಖವಾಡ ಧರಿಸಿ ಜಗತ್ತಿನ ಮುಂದೆ ನೀಚನಾಗೇ ಉಳಿಯುತ್ತಾನೆ. ಮುಂದಿನ ಆಡಿಯೋ ಲಾಂಚ್‌ಗೆ ಫೇಕ್ ಸ್ಟೋರಿಗಳನ್ನು ಕಟ್ಟಿ ಪಂಚ್ ಲೈನ್‌ಗಳನ್ನು ಸೇರಿಸಿ ಹೇಳುತ್ತೀರಿ. ದೇವರು ಎಲ್ಲವನ್ನು ನೋಡುತ್ತಾನೆ ಎಂಬುದನ್ನು ನೆನಪಿಡಿ ಎಂದು ನಯನತಾರಾ ಪತ್ರವೊಂದನ್ನು ಬರೆದುಕೊಂಡಿದ್ದು, ಇದೀಗ ಕಾಲಿವುಡ್​ನಲ್ಲಿ ಈ ವಿವಾದದ ಸದ್ದು ತುಂಬಾ ಜೋರಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net