ಒಂದು ವರ್ಷದೊಳಗೇ ತ್ರಿಭಾಷಾ ನಟಿಯಾದ ಸೂಪರ್ ಮಾಡೆಲ್

rasmi feb 17 2020
Published on

ಬೆಂಗಳೂರು: ಮಾಡೆಲ್ ಆಗಿ ಬಳಿಕ ಸಿನಿಮಾರಂಗಕ್ಕೆ ಬರುವುದು ಹೊಸದೇನಲ್ಲ. ಆದರೆ ಇಲ್ಲೊಬ್ಬರು ಸೂಪರ್ ಮಾಡೆಲ್ ಒಂದು ವರ್ಷದೊಳಗೇ ಆರು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಷ್ಟೇ ಅಲ್ಲ, ತ್ರಿಭಾಷಾ ನಟಿ ಎಂದೂ ಅನಿಸಿಕೊಂಡಿದ್ದಾರೆ.

2016ರಲ್ಲಿ ‘ಬೆಂಗಳೂರು ಸೂಪರ್ ಮಾಡೆಲ್’ ಆಗಿ ಹೊರಹೊಮ್ಮಿರುವ ರೂಪದರ್ಶಿ ರಶ್ಮಿ ಗೋಪಿನಾಥ್, ಒಂದು ವರ್ಷದ ಹಿಂದೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ವರ್ಷದೊಳಗೆ ನಾಲ್ಕು ಚಿತ್ರಗಳ ಶೂಟಿಂಗ್ ಮುಗಿಸಿ, ಇದೀಗ ಎರಡು ಸಿನಿಮಾಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದಕ್ಕಾಗಿ ಇವರು ಉದ್ಯೋಗವನ್ನೇ ತೊರೆದು ಬಂದಿದ್ದಾರೆ.

‘ನನಗೆ ಚಿಕ್ಕಂದಿನಿಂದಲೂ ಸಿನಿಮಾ ಆಸಕ್ತಿ ಇತ್ತು. ಆದರೆ ಮನೆಯಲ್ಲಿ ಆ ಬಗ್ಗೆ ಪ್ರೋತ್ಸಾಹ ಇರಲಿಲ್ಲ. ಒಂದು ಕಂಪನಿಯಲ್ಲಿ ಎಚ್​ಆರ್ ಆಗಿದ್ದ ನನಗೆ ಕಂಪ್ಯೂಟರ್ ಮುಂದೆ ಕುಳಿತು ಮಾಡುವ ಕೆಲಸ ಇಷ್ಟವೂ ಆಗುತ್ತಿರಲಿಲ್ಲ. ಈ ಮಧ್ಯೆ ನನ್ನ ಇಷ್ಟದ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಲು ಆಗುತ್ತಿಲ್ಲ ಎಂಬ ತೀವ್ರ ಬೇಸರದಿಂದ ನಾನು ಖಿನ್ನತೆಗೂ ಒಳಗಾಗಿದ್ದೆ. ಬಳಿಕ ಮನೆಯಲ್ಲಿ ಪಾಲಕರ ಮನವೊಲಿಸಿ, ಕೆಲಸವನ್ನೂ ಬಿಟ್ಟು ಸಿನಿಮಾರಂಗಕ್ಕೆ ಪ್ರವೇಶಿಸಿದೆ’ ಎನ್ನುತ್ತ ತಾವು ಸಾಗಿ ಬಂದ ಹಾದಿಯ ಬಗ್ಗೆ ಹೇಳಿಕೊಂಡರು ರಶ್ಮಿ ಗೋಪಿನಾಥ್.

‘ಕನ್ನಡದಲ್ಲಿ ಸಂದೀಪ್ ಗೌಡ ನಿರ್ದೇಶನ, ಮಧು ನಾಯಕರಾಗಿ ಅಭಿನಯಿಸುವ ಜತೆಗೆ ನಿರ್ವಣವನ್ನೂ ಮಾಡಿರುವ ‘ಅನಂತನ ಅವಾಂತರ’ ಚಿತ್ರದಲ್ಲಿನ ನಾಯಕಿಯರಲ್ಲಿ ಒಬ್ಬಳಾಗಿ ನಟಿಸಿದ್ದು, ಶೂಟಿಂಗ್ ಕೂಡ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಸಚಿನ್ ಪುರೋಹಿತ್ ನಿರ್ದೇಶನ ಹಾಗೂ ಅವರೇ ನಾಯಕರಾಗಿರುವ ಇನ್ನೂ ಹೆಸರಿಡದ ಚಿತ್ರದಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದೇನೆ. ಅಲ್ಲದೆ ರಾಯಶಿವ ನಿರ್ದೇಶನ ಮತ್ತು ಪವನ್ ಹೀರೋ ಆಗಿರುವ ‘ಪಾತ್ರ’ ಎಂಬ ಚಿತ್ರದಲ್ಲೂ ನಟಿಸುತ್ತಿದ್ದೇನೆ’ ಎಂದು ತಮ್ಮ ಚಿತ್ರಗಳ ಬಗ್ಗೆ ಮಾಹಿತಿ ನೀಡಿದರು ರಶ್ಮಿ.

ತೆಲುಗಿನಲ್ಲಿ ಅಲಿ, ಜಯಪ್ರಕಾಶ್, ಜೀವ ಮುಂತಾದವರು ಇರುವ ‘ಡಬ್ಬೇ ಡಬ್ಬು’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದೇನೆ. ಇದು ಕನ್ನಡದಲ್ಲಿ ‘ದುಡ್ಡೇ ದುಡ್ಡು’ ಎಂಬ ಹೆಸರಿನಲ್ಲಿ ತೆರೆ ಕಾಣಲಿದೆ. ತಮಿಳಿನಲ್ಲಿ ಯೋಗಿ ಬಾಬು ನಾಯಕರಾಗಿರುವ ‘ಕಾಕ್​ಟೇಲ್’ ಎಂಬ ಸಿನಿಮಾದಲ್ಲೂ ನಾಯಕಿ ಆಗಿ ಕಾಣಿಸಿಕೊಂಡಿದ್ದೇನೆ. ಸದ್ಯ ಸದ್ಯ ಸಿ.ವಿ.ಕುಮಾರ್ ಪ್ರೊಡಕ್ಷನ್ಸ್​ನಲ್ಲಿ ಮೂಡಿಬರುತ್ತಿರುವ ತಮಿಳು ಚಿತ್ರ ‘ವೈರಸ್’ನಲ್ಲಿ ನಟಿಸುತ್ತಿದ್ದೇನೆ ಎಂದು ರಶ್ಮಿ ತಮ್ಮ ಚಿತ್ರಗಳ ಬಗ್ಗೆ ವಿವರಣೆ ನೀಡಿದರು.

ಚಿತ್ರರಂಗಕ್ಕೆ ಬರಬೇಕು ಎಂಬ ಉದ್ದೇಶದಿಂದ ಒಂದೂವರೆ ವರ್ಷಗಳ ಹಿಂದೆ ನಾಟಕ ತರಬೇತಿಗೆ ಸೇರಿಕೊಂಡೆ. ನಂತರ ಗೊತ್ತಿರುವ ಮೂಲಗಳ ಮೂಲಕ ಸಿನಿರಂಗಕ್ಕೆ ಪ್ರವೇಶಿಸಿದೆ. ಒಂದೇ ವರ್ಷದಲ್ಲಿ ಆರು ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಕ್ಕಿತು. ನಾಲ್ಕರ ಶೂಟಿಂಗ್ ಮುಗಿದಿದ್ದು, ಇನ್ನೆರಡು ಚಿತ್ರೀಕರಣ ಹಂತದಲ್ಲಿವೆ. | ರಶ್ಮಿ ಗೋಪಿನಾಥ್ ನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net