40 ದಿನಗಳಿಂದ ಸನ್ನಿ ಮಾಡಿದ್ದು ಇದನ್ನೇ ... ಮಾಜಿ ನೀಲಿ ಚಿತ್ರಗಳ ಸುಂದರಿಯ ಹೊಸ ಪ್ಯಾಷನ್

Sunny Leone Final
Published on

ಲಾಕ್‌ಡೌನ್ ಸಂದರ್ಭದಲ್ಲಿ ಬೇರೆ ಸೆಲೆಬ್ರಿಟಿಗಳೆಲ್ಲಾ ಮನೆ ಕ್ಲೀನ್ ಮಾಡುವುದು, ಅಡುಗೆ ಮಾಡುವುದು, ಗಂಡನ ಜತೆಗೆ ಕಾಲ ಕಳೆಯುವುದು ಮಾಡುತ್ತಿದ್ದರೆ, ಸನ್ನಿ ಲಿಯೋನ್ ಮಾತ್ರ ಇವೆಲ್ಲವನ್ನೂ ಬಿಟ್ಟು ಇನ್ನೇನೋ ಮಾಡಿದ್ದಾರೆ. ಅಷ್ಟೇ ಅಲ್ಲ, 40 ದಿನಗಳಿಂದ ಮನೆಯಲ್ಲೇ ಕೂತು ಮಾಡಿದ್ದನ್ನು, ಇದೀಗ ಜಗಜ್ಜಾಹೀರು ಮಾಡಿದ್ದಾರೆ.

ಇಷ್ಟಕ್ಕೂ ಕಳೆದ 40 ದಿನಗಳಿಂದ ಸನ್ನಿ ಏನು ಮಾಡುತ್ತಿದ್ದರು ಗೊತ್ತಾ? ಪೇಂಟಿಂಗ್. ಈ ಮಾಜಿ ನೀಲಿ ಚಿತ್ರಗಳ ಸುಂದರಿಗೆ ಚಿತ್ರಕಲೆ ಬಹಳ ಇಷ್ಟವಂತೆ. ಆದರೆ, ಬ್ಯುಸಿ ಇದ್ದ ಕಾರಣ, ಪೇಂಟಿಂಗ್ ಬಗ್ಗೆ ಹೆಚ್ಚು ಗಮನ ಹರಿಸಿರಲಿಲ್ಲವಂತೆ. ಸರಿ ಲಾಕ್‌ಡೌನ್ ಘೋಷಣೆಯಾದಾಗ, ಮನೆಯಲ್ಲಿ ಕುಳಿತು ಏನು ಮಾಡುವುದು ಎಂಬ ಯೋಚನೆ ಬಂದಾಗ, ಹೊಳೆದಿದ್ದೇ ಪೇಂಟಿಂಗ್ ಮಾಡುವ ಐಡಿಯಾ. ತಕ್ಷಣ ಕ್ಯಾನ್ವಾಸ್, ಪೇಂಟ್ ಬ್ರಶ್ ಹಿಡಿದ ಅವರು ‘ಬ್ರೋಕನ್ ಗ್ಲಾಸ್’ ಎಂಬ ಚಿತ್ರ ಬಿಡಿಸಿದ್ದಾರೆ.

ಈ ಚಿತ್ರದ ವಿಶೇಷತೆ ಏನು ಗೊತ್ತಾ? ಇದು ಸದ್ಯಕ್ಕೆ ಎಲ್ಲರ ಜೀವನಕ್ಕೂ ಬಹಳ ಹತ್ತಿರವಾಗಿದೆ ಎಂಬುದು ಅವರ ಅಭಿಪ್ರಾಯ. ಅವರ ಬಿಡಿಸಿರುವ ಚಿತ್ರದಲ್ಲಿ ಒಂದಿಷ್ಟು ಗ್ಲಾಸ್‌ಪೀಸ್‌ಗಳಿದ್ದು, ಅದು ಎಲ್ಲರ ಜೀವನದ ಸಂಕೇತವಂತೆ. ‘ಸದ್ಯಕ್ಕೆ ಎಲ್ಲರೂ ಒಡೆದು ಹೋದ ಸ್ಥಿತಿಯಲ್ಲಿದ್ದಾರೆ. ಆದರೆ, ಈ ಗ್ಲಾಸ್ ತುಂಡುಗಳನ್ನೆಲ್ಲಾ ಜೋಡಿಸಿದರೆ, ಮತ್ತೊಮ್ಮೆ ಒಂದಾಗುತ್ತದೆ ಎನ್ನುವುದು ಈ ಲಾಕ್‌ಡೌನ್ ಆರ್ಟ್‌ನ ಸಂಕೇತ’ ಎಂದು ವಿವರಿಸಿದ್ದಾರೆ ಸನ್ನಿ ಲಿಯೋನ್.

ಅಂದಹಾಗೆ, ಈ ಚಿತ್ರವನ್ನು ಸೋಷಿಯಲ್ ಮೀಡಿಯಾ ಮೂಲಕ ಅನಾವರಣಗೊಳಿಸಿದ್ದಾರೆ ಸನ್ನಿ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಮುಂದೊಂದು ದಿನ ಸನ್ನಿ ಪೇಂಟರ್ ಆಗಿ ಜನಪ್ರಿಯರಾದರೆ ಆಶ್ಚರ್ಯವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net