

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಕಿರುತೆರೆ ಮತ್ತು ಬೆಳ್ಳಿತೆರೆ ಎರಡೂ ಕಡೆಗಳಲ್ಲಿ ಅನುಭವ ಪಡೆದಿರುವ ನಟ ಸುನಿಲ್ ನಾಯಕನಾಗಿರುವ, ಖುಷಿ ಮತ್ತು ಪ್ರಿಯಾ ಹೆಗ್ಡೆ ನಾಯಕಿಯರಾಗಿರುವ ಸಿನಿಮಾ ಒಲವಿನ ಪಯಣ. ಕಿಶನ್ ಬಲ್ನಾಡ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದು, ಇದೇ ತಿಂಗಳ 21ರಂದು ತೆರೆಗೆ ಬರಲಿದೆ. ಇದೇ ಖುಷಿಯಲ್ಲಿ ಇತ್ತೀಚೆಗಷ್ಟೆ ಚಿತ್ರದ ಟೀಸರ್ ಮತ್ತು ಹಾಡುಗಳನ್ನು ರಿಲೀಸ್ ಮಾಡಲಾಯಿತು.
ಗೊತ್ತು ಗುರಿಯಿಲ್ಲದೆ ಪ್ರೀತಿ, ಪ್ರೇಮ ಎಂದು ಓಡಾಡುತ್ತಿದ್ದ ಯುವಕನೊಬ್ಬ ಶ್ರೀಮಂತ ಯುವತಿಯನ್ನು ಪ್ರೀತಿಸಿ, ಆಕೆಯ ತಂದೆಗೇ ಸವಾಲು ಹಾಕಿ, ಅವಳನ್ನು ಮದುವೆಯಾಗುತ್ತಾನೆ. ಇನ್ನು ನಮ್ಮ ಸಂಸಾರ ಆನಂದ ಸಾಗರ ಎನ್ನುತ್ತಿರುವಾಗಲೇ ಎದುರಾಗೋ ಅನಿರೀಕ್ಷಿತ ಘಟನೆಗಳು ಅವನ ಜೀವನದ ದಿಕ್ಕನ್ನೇ ಬದಲಿಸಿಬಿಡುತ್ತವೆ. ನಂತರ ಆತ ಅದರಿಂದ ಹೊರಬರಲು ಏನೇನೆಲ್ಲ ಹರಸಾಹಸ ಮಾಡುತ್ತಾನೆ? ಎಂಬುದೇ ಒಲವಿನ ಪಯಣ ಚಿತ್ರದ ಕಥಾಹಂದರ.
ಚಿತ್ರದ ಬಗ್ಗೆ ನಿರ್ದೇಶಕ ಕಿಶನ್, ಕಳೆದ 17 ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರೂ ಸಿನಿಮಾ ನಿರ್ದೇಶಿಸಲು ನನಗೆ ಸಾಧ್ಯವಾಗಲಿಲ್ಲವಲ್ಲ ಎಂಬ ಕೊರಗಿತ್ತು. ಸುನಿಲ್ ಅದನ್ನು ನೀಗಿಸಿದರು, ಒಳ್ಳೇ ನಿರ್ಮಾಪಕರನ್ನು ಹುಡುಕಿಕೊಟ್ಟರು, ನಿರ್ಮಾಪಕರೇ ಮಾಡಿಕೊಂಡಿದ್ದ ಕಥೆಯಿದು, ಎರಡು ಸಿನಿಮಾಗಾಗುವಷ್ಟಿದ್ದ ಕಥೆಯನ್ನು ಒಂದು ಸಿನಿಮಾಗೆ ರೆಡಿ ಮಾಡಿಕೊಂಡು, ವಿರಾಜಪೇಟೆಯಲ್ಲಿ 12 ದಿನ ಉಳಿದಂತೆ ಬೆಂಗಳೂರಿನಲ್ಲಿ ಚಿತ್ರೀಕರಿಸಿದೆವು ಎಂದು ಮಾಹಿತಿ ನೀಡಿದರು. ನಾಯಕ ಸುನಿಲ್, ಇದು ಮಿಡಲ್ ಕ್ಲಾಸ್ ಹುಡುಗನ ಜೀವನದ ಪಯಣ, ಅದರಲ್ಲಿನ ಏಳು ಬೀಳುಗಳು, ತೊಂದರೆಗಳು, ಅಲ್ಲಿಂದ ಆತ ಹೊರಬರಲು ಹೇಗೆಲ್ಲ ಹೋರಾಡುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ ಎಂದು ಹೇಳಿದರು.
ನಾಗೇಶ್ ಮಯ್ಯ, ಪದ್ಮಜಾರಾವ್, ಬಲ ರಾಜ್ವಾಡಿ, ಪೃಥ್ವಿರಾಜ್, ಸುಧಾಕರ ಬನ್ನಂಜೆ, ಸೂರ್ಯಕಿರಣ್, ಧನಂಜಯ್, ರಾಮ್ ಧನುಷ್, ಬೇಬಿ ರಿಧಿ ತಾರಾಗಣದ್ದಾರೆ. ಜೀವನ್‌ಗೌಡ ಛಾಯಾಗ್ರಹಣ, ಕೀರ್ತಿರಾಜ್ ಸಂಕಲನ ಚಿತ್ರಕ್ಕಿದೆ.