

ಬೆಂಗಳೂರು: ದುಶ್ಯಂತ್ ಎಂಬ ಹೊಸ ಹುಡುಗನ ಜತೆಗೆ "ಸಿಂಪಲ್' ಸುನಿ ಒಂದು ಚಿತ್ರ ಮಾಡಬೇಕಿತ್ತು. "ಅವತಾರ್ ಪುರುಷ' ಬಿಡುಗಡೆಯಾಗುತ್ತಿದ್ದಂತೆಯೇ, ಆ ಚಿತ್ರವೂ ಶುರುವಾಗಿರಬೇಕಿತ್ತು. ಆದರೆ, ಆ ಚಿತ್ರದ ಬಜೆಟ್ ಹೆಚ್ಚಾಯಿತು ಎಂಬ ಕಾರಣಕ್ಕೆ ಮುಂದೂಡಲಾಗಿದೆ. ಅದರ ಬದಲು ದುಶ್ಯಂತ್ಗೆ "ಗತವೈಭವ' ಎಂಬ ಇನ್ನೊಂದು ಚಿತ್ರ ಮಾಡಲಿದ್ದಾರೆ ಸುನಿ. ಮೊದಲ ಹಂತವಾಗಿ ಚಿತ್ರದ ನಾಯಕನನ್ನು ಅವರು ಪರಿಚಯಿಸುವುದಕ್ಕೆ ಸಿದ್ಧತೆ ನಡೆಸಿದ್ದು, ನಾಳೆ (ಫೆ.28) ಬೆಳಿಗ್ಗೆ ನಾಯಕನನ್ನು ಪರಿಚಯಿಸುವ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ.
"ಗತವೈಭವ' ಬಗ್ಗೆ "ವಿಜಯವಾಣಿ' ಜತೆಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡ ಸುನಿ, "ಇದೊಂದು ಸೈ&ೈ ಚಿತ್ರ. ಇದರಲ್ಲಿ ನಾಯಕ ಒಬ್ಬ ವಿಎಫ್ಎಕ್ಸ್ ಕಲಾವಿನಾಗಿ ಕೆಲಸ ಮಾಡುತ್ತಿರುತ್ತಾನೆ. ಅವನು ಸೃಷ್ಟಿ ಮಾಡಿದ ಪ್ರಪಂಚದಲ್ಲೇ ಸಿಲುಕುತ್ತಾನೆ. ಅದು ಅವನ ಕಲ್ಪನೆಯೋ, ನೈಜತೆಯೋ ಎಂಬ ಗೊಂದಲ ಒಂದು ಹಂತದಲ್ಲಿ ಎದುರಾಗುತ್ತದೆ. ಅಲ್ಲಿಂದ ಚಿತ್ರ ಒಂದು ತಿರುವು ಪಡೆಯುತ್ತದೆ' ಎನ್ನುತ್ತಾರೆ.
ಈ ಚಿತ್ರದ ಚಿತ್ರೀಕರಣ ಮೇ ತಿಂಗಳಿನಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆಯಂತೆ. "ದುಶ್ಯಂತ್ ಬಿಟ್ಟರೆ ಬೇರೆ ಯಾವ ಕಲಾವಿದರ ಆಯ್ಕೆ ಆಗಿಲ್ಲ. ಸದ್ಯ ಹೆಸರು ಘೋಷಣೆ ಮಾಡಿದ್ದೇವೆ. ಸುನಿ ಸಿನಿಮಾಸ್ನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ. "ಅವತಾರ್ ಪುರುಷ' ಬಿಡುಗಡೆಯಾದ ಮೇಲೆ ಈ ಚಿತ್ರ ಪ್ರಾರಂಭ' ಎನ್ನುತ್ತಾರೆ.