

ಬೆಂಗಳೂರು: ದಕ್ಷಿಣ್ ಭಾರತದ ಜನಪ್ರಿಯ ನೃತ್ಯ ನಿರ್ದೇಶಕರ ಪೈಕಿ ಮುಗೂರು ಸುಂದರಂ (ಪ್ರಭುದೇವ ಅವರ ತಂದೆ) ಪ್ರಮುಖರು. ಈಗಾಗಲೇ ಕನ್ನಡ, ತೆಲುಗು, ತಮಿಳು ಮುಂತಾದ ಭಾಷೆಗಳ ನೂರಾರು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಸುಂದರಂ ಮಾಸ್ಟರ್, ಒಂದಿಷ್ಟು ಚಿತ್ರಗಳಲ್ಲೂ ನಟಿಸಿದ್ದಾರೆ. ಈಗ ಬಹಳ ದಿನಗಳ ನಂತರ ಅವರು, ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸುತ್ತಿರುವ ‘ಸೂಪರ್ ಸ್ಟಾರ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಸುಂದರಂ ಅವರ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದ್ದು, 86ರ ವಯಸ್ಸಿನಲ್ಲೂ ಉತ್ಸಾಹದಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಅವರ ಬಗ್ಗೆ ಚಿತ್ರತಂಡದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರದಲ್ಲೂ ನೃತ್ಯ ನಿರ್ದೇಶಕರ ಪಾತ್ರದಲ್ಲೇ ಸುಂದರಂ ಮಾಸ್ಟರ್ ಕಾಣಿಸಿಕೊಂಡಿದ್ದು, ಅವರ ಅಭಿನಯದ ಕೆಲವು ದೃಶ್ಯಗಳನ್ನು ಚಿತ್ರತಂಡವು ಮೇಕಿಂಗ್ ಟೀಸರ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದೆ. ರಮೇಶ್ ವೆಂಕಟೇಶ್ ಬಾಬು ನಿರ್ದೇಶನದ ಈ ಚಿತ್ರದ ಎರಡು ಹಂತಗಳ ಚಿತ್ರೀಕರಣ ಊಗಾಗಲೇ ಮುಗಿದಿದ್ದು, 3ನೇ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ನಿರಂಜನ್ ಸುಧೀಂದ್ರಗೆ ನಾಯಕಿಯಾಗಿ ಜಾರ ಯಾಸ್ಮಿನ್ ಅಭಿನಯಿಸಿದ್ದು, ಮಿಕ್ಕಂತೆ ಅಚ್ಯುತ ಕುಮಾರ್, ರಂಗಾಯಣ ರಘು, ದೇವಯಾನಿ, ಸುಧಾ ಬೆಳವಾಡಿ, ಅವಿನಾಶ್, ಸೂರಜ್ (ಕಾಮಿಡಿ ಕಿಲಾಡಿಗಳು) ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.