ಮತ್ತೊಮ್ಮೆ ರಾಣಿಯಾಗಿ ಸುಮಲತಾ

Sumalatha
Published on

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆಯಾದ ನಂತರ ಸುಮಲತಾ ಅವರು ‘ರಾಜವೀರ ಮದಕರಿ ನಾಯಕ’ ಚಿತ್ರವನ್ನು ಒಪ್ಪಿಕೊಂಡರೂ, ಆ ಚಿತ್ರಕ್ಕಿನ್ನೂ ಬಣ್ಣ ಹಚ್ಚಿಲ್ಲ. ಈ ಚಿತ್ರದಲ್ಲಿ ಅವರು ದರ್ಶನ್ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಲಾಕ್​ಡೌನ್​ನಿಂದಾಗಿ ಅವರು ಇನ್ನಷ್ಟೇ ಈ ಚಿತ್ರಕ್ಕೆ ಬಣ್ಣ ಹಚ್ಚಬೇಕಿದೆ. ಈ ಮಧ್ಯೆ, ಸುಮಲತಾ ಅವರು ರವಿಚಂದ್ರನ್ ಅಭಿನಯದ ‘ಕನ್ನಡಿಗ’ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಅವರು ಗೇರುಸೊಪ್ಪದ ರಾಣಿ ಚೆನ್ನಭೈರಾದೇವಿಯಾಗಿ ಅಭಿನಯಿಸುತ್ತಿದ್ದಾರೆ. ಚೆನ್ನಭೈರಾದೇವಿಯು 54 ವರ್ಷಗಳ ಕಾಲ ಆಳ್ವಿಕೆ ನಡೆಸುವ ಮೂಲಕ, ಭಾರತದಲ್ಲೇ ಅತೀ ಹೆಚ್ಚು ಕಾಲ ಆಳ್ವಿಕೆ ನಡೆಸಿದ ಮಹಾರಾಣಿ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ. ಈ ಪಾತ್ರದಲ್ಲಿ ನಟಿಸುವುದಕ್ಕೆ ಸುಮಲತಾ ಅವರು ಒಪ್ಪಿಕೊಂಡಿರುವುದಾಗಿ ನಿರ್ದೇಶಕ ಬಿ.ಎಂ. ಗಿರಿರಾಜ್ ಹೇಳುತ್ತಾರೆ. ಇನ್ನು, ಈ ಚಿತ್ರದ ಇನ್ನೊಂದು ಪ್ರಮುಖ ಪಾತ್ರದಲ್ಲಿ ಪಾವನಾ ಗೌಡ ನಟಿಸುತ್ತಿದ್ದಾರೆ.

ಈ ಹಿಂದೆ, ಗಿರಿರಾಜ್ ನಿರ್ದೇಶನದ ‘ಜಟ್ಟ’ ಚಿತ್ರದಲ್ಲಿ ನಟಿಸಿದ್ದ ಪಾವನಾ, ಈಗ ‘ಕನ್ನಡಿಗ’ದಲ್ಲಿ ರವಿಚಂದ್ರನ್ ಅವರ ಹೆಂಡತಿಯಾಗಿ ಮತ್ತು ಗಟ್ಟಿಗಿತ್ತಿಯಾಗಿ ಕಾಣಿಸಿಕೊಳ್ಳುತ್ತಿ ದ್ದಾರಂತೆ. ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡುವ ಅವರು, ‘ಇದುವರೆಗೂ ಜನ ನನ್ನನ್ನು ‘ಗೊಂಬೆಗಳ ಲವ್’ ಮತ್ತು ‘ಜಟ್ಟ’ ಚಿತ್ರಗಳಲ್ಲಿನ ಪಾತ್ರಗಳ ಮೂಲಕ ಗುರುತಿಸುತ್ತಿದ್ದರು. ಈ ಚಿತ್ರ ಬಂದ ನಂತರ, ಈ ಪಾತ್ರದಿಂದ ಗುರುತಿಸುತ್ತಾರೆ ಎಂಬ ನಂಬಿಕೆ ಇದೆ. ಇದೊಂದು ಪ್ರಬಲವಾದ ಮತ್ತು ಅಷ್ಟೇ ಸವಾಲಿನ ಪಾತ್ರ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net