

ಚಿತ್ರ: ಕಪಟಿ
ನಿರ್ದೇಶನ: ರವಿಕಿರಣ್, ಚೇತನ್
ನಿರ್ಮಾಣ: ದಯಾಳ್ ಪದ್ಮನಾಭನ್
ತಾರಾಗಣ: ಸುಕೃತಾ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್, ಪವನ್, ಅಜಿತ್ ಮತ್ತಿತರರು.
ಹರ್ಷವರ್ಧನ್ ಬ್ಯಾಡನೂರು
ತಂತ್ರಜ್ಞಾನ ಮುಂದುವರಿದಂತೆ, ಅದರಿಂದ ಉಪಯೋಗವೂ ಹೆಚ್ಚು, ದುರುಪಯೋಗವೂ ಹೆಚ್ಚು. ಅದಕ್ಕೆ ಉದಾಹರಣೆ ಇಂರ್ಟನೆಟ್. ಜಗತ್ತನೇ ಮುಷ್ಠಿಯಲ್ಲಿ ಹಿಡಿಯುವಂತೆ ಮಾಡಿದ ಈ ಅಂತರ್ಜಾಲ, ಜನರ ಸುತ್ತ ಮಾಯಾಜಾಲ ಹೆಣೆದು ಕೂಡಿಹಾಕಿದೆ. ಅದರಲ್ಲೂ ಡಾರ್ಕ್ವೆಬ್ನಲ್ಲಿ ಎಂಬ ಕರಾಳ ಲೋಕವನ್ನು ಸೃಷ್ಟಿಸಿ, ಕೂತ ಜಾಗದಿಂದಲೇ ಅಮಾಯಕ ಜನರನ್ನು ಲೂಟಿ ಮಾಡುತ್ತಿದ್ದಾರೆ. ಪ್ರತಿದಿನ ನೂರಾರು ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ, ಮೋಸ ಮಾಡುವವರೂ ಕಡಿಮೆಯಾಗಿಲ್ಲ, ಮೋಸ ಹೋಗುವವರೂ ಕಡಿಮೆಯಾಗಿಲ್ಲ. ಇಂತಹ ಡಾರ್ಕ್ವೆಬ್ ಸುತ್ತ ಸುತ್ತುವ ಕಥೆಯೇ "ಕಪಟಿ'.
ಪ್ರಿಯಾ (ಸುಕೃತಾ) ಹೆಸರಾಂತ ವಸ್ತ್ರವಿನ್ಯಾಸಕಿ. ತಮ್ಮ ಬಿದ್ದು ಪೆಟ್ಟು ಮಾಡಿಕೊಂಡು ಹಾಸಿಗೆ ಹಿಡಿದಿದ್ದರೆ, ತಂದೆ ಅದೇ ನೋವಿನಲ್ಲಿ ಕುಡಿತಕ್ಕೆ ದಾಸರಾಗಿರುತ್ತಾರೆ. ಹೊಸ ಜಾಗಕ್ಕೆ ಶ್ಟ್ಿ ಆದರೆ ಏನಾದರೂ ಬದಲಾವಣೆ ಆಗಬಹುದೆಂಬ ಕಾರಣಕ್ಕೆ, ಕುಟುಂಬದ ಜತೆ ಪ್ರಿಯಾ ಹೊಸ ಮನೆಗೆ ಶಿಫ್ಟ್ ಆಗುತ್ತಾಳೆ. ಅಲ್ಲಿ ಆಕೆಗೆ ವಿಚಿತ್ರ ಅನುಭವಗಳು ಆಗತೊಡಗುತ್ತವೆ. ಅದಕ್ಕೆ ಕಾರಣ ಹುಡುಕಲು ಹೋದರೆ, ಅಲ್ಲಿ ಡಾರ್ಕ್ವೆಬ್ನ ಕರಾಳ ಲೋಕದ ಅನಾವರಣವಾಗುತ್ತದೆ. ಆನ್ಲೈನ್ ವಂಚನೆಯಿಂದ ಹಿಡಿದು ಡಾರ್ಕ್ವೆಬ್ ಎಂಬ ಭೂಗತ ಜಗತ್ತನ್ನು ಎಳೆಎಳೆಯಾಗಿ ರವಿಕಿರಣ್ ಮತ್ತು ಚೇತನ್ "ಕಪಟಿ' ಮೂಲಕ ತೆರೆದಿಟ್ಟಿದ್ದಾರೆ.
ಹೊರಗೆ ಅಂಡರ್ವರ್ಲ್ಡ್ ಇರುವಂತೆಯೇ ಇಂಟರ್ನೆಟ್ನಲ್ಲೂ ಒಂದು ಅಂಡರ್ವರ್ಲ್ಡ್ ಇದ್ದು, ಅದು ಹೇಗೆ ಕೆಲಸ ಮಾಡುತ್ತದೆ? ಎಂಬುದನ್ನು ಇಲ್ಲಿ ನೋಡಬಹುದು. ಕೆಲವೆಡೆ ಟ್ವಿಸ್ಟ್ಗಳಿದ್ದರೂ, ಚಿತ್ರಕಥೆಗೆ ಸ್ವಲ್ಪ ವೇಗ ನೀಡಿದ್ದರೆ ಪ್ರೇಕ್ಷಕರನ್ನು ಸೀಟಂಚಲ್ಲಿ ಕೂರಿಸುವ ಅವಕಾಶವಿತ್ತು. ಮಾನಸಿಕ ಖಿನ್ನತೆಗೆ ಒಳಗಾದ ಪ್ರಿಯಾ ಪಾತ್ರದಲ್ಲಿ ಸುಕೃತಾ, ಅಮೆರಿಕದಲ್ಲಿ ನರ್ಸಿಂಗ್ ಓದಿ ಬಂದು ಆನ್ಲೈನ್ನಲ್ಲಿ ಕಳ್ಳಾಟವಾಡುವ ಸುಮನ್ ಆಗಿ ದೇವ್ ದೇವಯ್ಯ, ಪುಡಿರೌಡಿ ಚಕ್ರಿ ಅಲಿಯಾಸ್ ಜುಟ್ಟು ಪಾತ್ರದಲ್ಲಿ ಸಾತ್ವಿಕ್ ಕೃಷ್ಣನ್ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.