ಸುಕ್ಕಾ ಸೂರಿ ಮಂಕಿ ಸೀನ

monkey seena feb 20 2020
Published on

‘ಇವರು ನದಿಯಂತೆ.. ನಿರಂತರ ಹರಿವು, ಹುಡುಕಾಟ, ಧ್ಯಾನಸ್ಥ ಸ್ಥಿತಿ. ಅನುಭವಗಳ ಆಗರ. ಈ ಬಾರಿ ಶಿವರಾತ್ರಿಗೆ ಮತ್ತೊಂದಿಷ್ಟು ಬದುಕಿನ ಪ್ರಶ್ನೆಗಳಿಗೆ ಉತ್ತರದ ಹುಡುಕಾಟದೊಂದಿಗೆ ‘ಪಾಪ್​ಕಾರ್ನ್ ಮಂಕಿ ಟೈಗರ್’ ಜತೆ ಬರುತ್ತಿದ್ದೇವೆ’- ನಿರ್ದೇಶಕ ಸೂರಿ ಅವರ ಬಗ್ಗೆ ಕೆಲ ದಿನಗಳ ಹಿಂದಷ್ಟೇ ನಟ ಡಾಲಿ ಧನಂಜಯ ಟ್ವಿಟರ್​ನಲ್ಲಿ ಹೀಗೊಂದು ಪೋಸ್ಟ್ ಹಾಕಿದ್ದರು. ಸೂರಿ ಅವರನ್ನು ನದಿಗೆ ಹೋಲಿಸಿ, ಆ ನದಿಯಲ್ಲಿ ತಾವು ಪಯಣಿಸಿದ ಅನುಭವವನ್ನೂ ಕಿರಿದಾಗಿ ಹೇಳಿಕೊಂಡಿದ್ದರು. ಈಗ ಆ ಪಯಣವನ್ನು ವಿಸ್ತರಿಸಿದ್ದಾರೆ. ಆ ಸೂರಿ ಎನ್ನುವ ನದಿ ನೀರಿನ ಸೆಳೆತ, ಅದರೊಂದಿಗಿನ ಸುದೀರ್ಘ ಪಯಣದ ಅನುಭವವನ್ನು ಸಿನಿಮಾ ಬಿಡುಗಡೆ (ಫೆ. 21) ಪ್ರಯುಕ್ತ ‘ಮಂಕಿ ಸೀನ’ ಅಲಿಯಾಸ್ ಧನಂಜಯ ಸಿನಿವಾಣಿ ಜತೆ ಹಂಚಿಕೊಂಡಿದ್ದಾರೆ.

‘ಟಗರು’ ಆದಮೇಲೆ ‘ಡಾಲಿ’ ಸಿನಿಮಾ ಮಾಡೋಣ ಎಂದು ಸೂರಿ ಹೇಳಿದ್ದರು. ಆ ನಿರ್ಧಾರ ಬದಲಾಗಿ, ‘ಬೇಡ ಬೇಡ.. ಅದನ್ನು ಬಿಟ್ಟು ಬೇರೇನಾದರೂ ಮಾಡೋಣ ತಾಳು..’ ಎಂದಿದ್ದರು. ಆಗ ಶುರುವಾಗಿದ್ದೇ ‘ಪಾಪ್​ಕಾರ್ನ್ ಮಂಕಿ ಟೈಗರ್’. ಯಾವುದಾದರೂ ಒಂದು ಬಣ್ಣ ಇಷ್ಟವಾದರೆ, ಅದನ್ನು ಇಟ್ಟುಕೊಂಡು ಮತ್ತಷ್ಟು ಪೇಂಟ್ ಮಾಡಬೇಕೆಂಬ ಬಯಕೆ ಮತ್ತು ಆಸೆ ಸೂರಿ ಅವರದ್ದು. ಹೀಗಿರುವಾಗ ‘ಇನ್ನೊಂದು ವರ್ಷ ಒಟ್ಟಿಗೆ ಜರ್ನಿ ಮಾಡೋಣ್ವಾ?’ ಎಂದು ಸೂರಿ ಕೇಳಿದ್ದರು. ತಡಮಾಡದೇ ಒಪ್ಪಿಕೊಂಡೆ. ‘ಡಾಲಿ ಪಾತ್ರದಿಂದ ನಿನ್ನೊಳಗಿನ ಕೋಪ ಹೊರಬಂದಿತ್ತು. ಈಗ ನಿನ್ನೊಳಗಡೆ ಇನ್ನೊಬ್ಬ ಮನುಷ್ಯನಿದ್ದಾನೆ. ಅವನ ಕೋಪ-ತಾಪ ತೋರಿಸೋಣ’ ಎಂದಿದ್ದರು. ಈಗ ಆ ಒಂದು ವರ್ಷದ ಪಯಣ ಮುಗಿದಿದೆ. ಡಾಲಿ ಆಗಿದ್ದವನು ಸೀನನಾಗಿ ಬದಲಾಗಿದ್ದೇನೆ’ ಎಂದು ಹೇಳಿಕೊಳ್ಳುತ್ತ ಮಾತಿಗಿಳಿದರು ಧನಂಜಯ. ಆಗ ಸೀನನ ಒಂದೊಂದೇ ಮುಖದ ಅನಾವರಣ ಆಗುತ್ತ ಹೋಯಿತು.

ಜಂಗಮರ ಸಂಗಮ ಆದಂಗಾತು: ‘ನಮಗೆ ಗೊತ್ತಿಲ್ಲದೆ, ನಮ್ಮದೇ ರೀತಿಯ ಒಂದಷ್ಟು ಮನಸ್ಥಿತಿಗಳು ಒಟ್ಟೊಟ್ಟಿಗೆ ಸೇರಿದಾಗ ಹೇಗಿರುತ್ತದೋ, ಇಲ್ಲಿಯೂ ಹಾಗೇ ಇದೆ. ನನ್ನ ಮತ್ತು ಸೂರಿ ಅವರ ಮನಸ್ಥಿತಿಗಳು ಹೊಂದುತ್ತವೆ. ಇಬ್ಬರ ಫಿಲಾಸಫಿಯೂ ಮ್ಯಾಚ್ ಆಗುತ್ತದೆ. ನಾನೂ ಒಂದು ಹುಟುಕಾಟದಲ್ಲಿದ್ದೇನೆ, ಅವರೂ ಹುಡುಕಾಟದಲ್ಲಿದ್ದಾರೆ. ‘ಟಗರು’ ಜತೆ ಶುರುವಾಗಿದ್ದ ಜರ್ನಿ, ಮಂಕಿ ಮೂಲಕ ಕಂಟಿನ್ಯೂ ಆಯ್ತು. ಒಂದು ರೀತಿ ಜಂಗಮರ ಸಂಗಮ ಆದಂಗಾಯ್ತು. ಅವರೂ ಒಂದು ರೀತಿ ಜಂಗಮರು, ನಾನೂ ಒಂದು ರೀತಿ ಜಂಗಮನೇ’ ಎಂದು ಸೂರಿ ಸಂಗದಿಂದ ಏನೆಲ್ಲ ಕಲಿತೆ ಎಂಬುದನ್ನು ವಿವರಿಸುತ್ತಾರೆ ಡಾಲಿ.

ಬರೀ ನಿರ್ದೇಶಕರಲ್ಲ, ಅವರೊಬ್ಬ ಪೇಂಟರ್..: ಸೂರಿ ಸಿನಿಮಾ ನಿರ್ದೇಶಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅವರೊಳಗೊಬ್ಬ ಕಲಾವಿದ, ಪೇಂಟರ್ ಅಡಗಿದ್ದಾನೆ ಎಂಬುದು ಅವರ ಆಪ್ತವಲಯಕ್ಕಷ್ಟೇ ಗೊತ್ತಿರುವ ಸತ್ಯ. ಹೌದು.. ಪೇಂಟರ್ ಆಗಿರುವ ಸೂರಿ, ಪೇಂಟಿಂಗ್ ರೀತಿಯಲ್ಲಿ ಸಿನಿಮಾ ಕಟ್ಟಿಕೊಡುತ್ತ ಬಂದಿದ್ದಾರೆ. ಅದು ಅವರ ಚಿತ್ರದ ಪ್ರತಿ ದೃಶ್ಯದಲ್ಲಿ ಗೋಚರಿಸುತ್ತದೆ. ‘ಬೇಸಿಕಲಿ ಸೂರಿ ಅವರು ಪೇಂಟರ್. ಕಾವ್ಯದ ರೀತಿಯಲ್ಲಿ ಅವರ ಸಿನಿಮಾ ಜೀವಿಸಿರುತ್ತದೆ. ಪ್ರತಿ ಫ್ರೇಮ್ಲ್ಲೂ ನೈಜತೆಯನ್ನು ಸಾಧಿಸಲು ಅವರಿಂದ ಪ್ರಯತ್ನ ಆಗಿರುತ್ತದೆ. ‘ಟಗರು’ ಚಿತ್ರದಲ್ಲೂ ಅಂಥದ್ದೇ ಪ್ರಯತ್ನ ನಡೆದಿತ್ತು. ಮಂಕಿಯಲ್ಲಿ ಅದಕ್ಕಿಂತ ವಿಭಿನ್ನ ಪ್ರಯತ್ನಗಳು ನಡೆದಿವೆ’ ಎಂಬುದು ಮಂಕಿ ಸೀನ ಅಲಿಯಾಸ್ ಧನಂಜಯ ಮಾತು.

ಸೂರಿ ಫಿಲಾಸಫಿ ಇಲ್ಲಿಯೂ ಮುಂದುವರಿಕೆ: ನಿರ್ದೇಶಕ ಸೂರಿ ಸಿನಿಮಾಗಳೆಂದರೆ ಅಲ್ಲಿ ನೈಜತೆಗೆ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಜತೆಗೆ ಒಂದಷ್ಟು ಫಿಲಾಸಫಿಕಲ್ ಅಂಶಗಳು ಕಣ್ಣಿಗೆ ಕಾಣಿಸುತ್ತವೆ. ಆ ಅಂಶಗಳು ‘ಪಾಪ್​ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲೂ ಮುಂದುವರಿದಿವೆ ಎಂಬುದು ಮಂಕಿ ಸೀನನ ಮನದಾಳ.

‘ಒಂದು ಕವಿತೆ ಬರೆದರೆ ಅದನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೇವೋ, ಹಾಗೆ ಸೂರಿ ಚಿತ್ರವನ್ನೂ ಅರ್ಥ ಮಾಡಿಕೊಳ್ಳಬೇಕು. ವ್ಯಕ್ತಿಯ ಬದುಕು ಹೇಗಿದೆಯೋ ಅದನ್ನು ಇದ್ದಂತೆಯೇ ಸೆರೆ ಹಿಡಿದಿದ್ದಾರೆ. ನೈಜತೆಯ ಜತೆಗೆ ಫಿಲಾಸಫಿ ಹೇಳುವ ಕೆಲಸ ಇಲ್ಲಿಯೂ ಮುಂದುವರಿದಿದೆ. ಕಥೆ ಬಗ್ಗೆ ಒಂದಷ್ಟು ಕುತೂಹಲ ಸೃಷ್ಟಿಸುವ ಕಾರ್ಯವೂ ಈಡೇರಿದೆ’ ಎನ್ನುವ ಡಾಲಿ, ಹಲವು ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಅವರಿಗೇ ವಿಶೇಷ ಮತ್ತು ವಿಚಿತ್ರವೆಂಬಂತೆ ಕಾಣಿಸಿದೆಯಂತೆ.

ಕೂದಲಿಗೆ ಕತ್ತರಿ ಬಿತ್ತು; ಉದ್ಧಾರ ಆದೆ: ಧನಂಜಯ ಇಲ್ಲಿಯವರೆಗೂ ಹೇರಳವಾದ ಗಡ್ಡ, ತಲೆಮೇಲೆ ದಟ್ಟವಾದ ಕೂದಲಿನೊಂದಿಗೆ ವಿವಿಧ ಪಾತ್ರಗಳಾಗಿ ಕಣ್ಣಿಗೆ ಕಾಣಿಸಿದ್ದುಂಟು. ಆದರೆ, ಇತ್ತೀಚಿನ ಕೆಲ ಸಿನಿಮಾಗಳಲ್ಲಿ ಫುಲ್ ಟ್ರಿಮ್ ಲುಕ್​ನಲ್ಲಿಯೇ ಎದುರಾಗಿದ್ದಾರೆ. ಆ ಬಗ್ಗೆ ಅಷ್ಟೇ ಹಾಸ್ಯವಾಗಿಯೇ ಹೇಳಿಕೊಂಡಿದ್ದಾರೆ. ‘ಇಲ್ಲಿಯವರೆಗೂ ಉದ್ದುದ್ದ ಕೂದಲು ಬಿಟ್ಟು ಕಾಣಿಸಿಕೊಂಡಿದ್ದೆ. ಆದರೆ, ಗೆಲುವು ಅಷ್ಟಕಷ್ಟೇ ಎಂಬಂತಿತ್ತು. ಯಾವಾಗ ಕೂದಲಿಗೆ ಕತ್ತರಿ ಬಿತ್ತೋ ಅಂದೇ ನಾನು ಉದ್ಧಾರ ಆಗಿದ್ದು. ‘ಪಾಪ್​ಕಾರ್ನ್..’ ಮಾಡಬೇಕೆಂದು ತೀರ್ಮಾನ ಆದಾಗ, ‘ಪಾತ್ರಕ್ಕಾಗಿ ಪೂರ್ತಿ ತಲೆ ಬೋಳಿಸಿಕೊಳ್ಳಬೇಕು..’ ಎಂದಿದ್ದರು ಸೂರಿ. ಖುಷಿಯಲ್ಲೇ ಒಪ್ಪಿಕೊಂಡು ಮುಡಿಕೊಟ್ಟೆ. ಕೂದಲಿನ ಬೆಳವಣಿಗೆ ಆದಂತೆ ಪಾತ್ರದ ಚಿತ್ರೀಕರಣವೂ ಸಾಗಿತು’ ಎಂದು ಗೆಲುವಿನ ನಗು ಹೊರಹಾಕಿದರು.

ಡಾಲಿಯೇ ಬೇರೆ, ಸೀನನೇ ಬೇರೆ: ‘ಟಗರು’ ಚಿತ್ರದಲ್ಲಿ ಧನಂಜಯ ಪಾತ್ರ ನೋಡಿ ಇಡೀ ಕರುನಾಡೇ ಫಿದಾ ಆಗಿತ್ತು. ಈಗ ಅದೇ ಸೂರಿ ನಿರ್ದೇಶನದ ‘ಪಾಪ್​ಕಾರ್ನ್ ಮಂಕಿ ಟೈಗರ್’ನಲ್ಲಿ ಮಂಕಿ ಸೀನನನ್ನೂ ಡಿಸೈನ್ ಮಾಡಿದ್ದಾರಂತೆ ಸೂರಿ. ‘ ಡಾಲಿಗೂ, ಮಂಕಿ ಸೀನನಿಗೂ ಸಂಬಂಧ ಇಲ್ಲ. ಇಬ್ಬರದ್ದು ಬೇರೆಯದೇ ಮನಸ್ಥಿತಿ. ಅಲ್ಲಿ ಕ್ರೖೆಂ ಲೋಕದ ನಂಟಿತ್ತು. ಇಲ್ಲಿ ಅದರ ಜತೆಗೆ ಫಿಲಾಸಫಿಕಲ್ ಜರ್ನಿಯನ್ನೂ ಬೆರೆಸಲಾಗಿದೆ. ನೋಡಿರುವ ಬದುಕಿಗೆ ಒಂದಷ್ಟು ಕನ್ನಡಿ ಹಿಡಿಯಲಾಗಿದೆ. ಸಂಬಂಧಗಳ ಮೌಲ್ಯಗಳ ಸುತ್ತ ಸಿನಿಮಾ ಸಾಗಲಿದೆ’ ಎನ್ನುವ ಧನು, ಸೀನನ ಪಾತ್ರದ ಬಗ್ಗೆಯೂ ವಿವರಿಸುತ್ತಾರೆ. ‘ಸೀನ ಪಾತ್ರದಲ್ಲಿ ಆರೇಳು ವರ್ಷದ ಜರ್ನಿ ಇದೆ. ಕೆಲವೊಂದಿಷ್ಟು ಏರುಪೇರುಗಳಿವೆ, ಘಟ್ಟಗಳಿವೆ. ಟೈಗರ್ ಸೀನನಾಗಿ, ಮಂಕಿ ಸೀನ, ಪಾಪ್​ಕಾರ್ನ್ ಸೀನ ಹೀಗೆ ಆತ ಬಂದು ಹೋಗುತ್ತಾನೆ. ಆತ ಕ್ರೂರಿ ಅಲ್ಲ. ಆತನ ಬದುಕಿನಲ್ಲಿ ಬಂದು ಹೋಗುವ ಘಟನಾವಳಿಗಳೂ ಆ ರೀತಿ ಕಾಣಿಸುತ್ತಿರುತ್ತವೆ’ ಎಂದು ಪಾತ್ರವಾದ ವಿವರ ಹೇಳಿಕೊಳ್ಳುತ್ತಾರೆ.

ಬದುಕೇ ಒಂದು ಪಾಠ, ಅಲ್ಲಿ ಕಲಿಕೆಗೆ ಕೊನೆಯೇ ಇಲ್ಲ: ಕಲಾವಿದರಿಗೆ ಪ್ರತಿ ಪಾತ್ರವೂ ಒಂದು ಅನುಭವದ ಸಾಗರ. ಯಾವುದಾದರೊಂದು ಮಾರ್ಗದಲ್ಲಿ ಏನಾದರೊಂದು ಅವರಿಗೆ ದಕ್ಕಿರುತ್ತದೆ. ಅಂಥ ಅನುಭವ ಡಾಲಿಗೂ ಆಗಿವೆ. ಕ್ರೖೆಂ ಲೋಕ ಹೀಗೂ ಇರುತ್ತಾ ಎಂಬುದನ್ನು ಮನದಟ್ಟು ಮಾಡಿಕೊಂಡಿದ್ದಾರೆ. ‘ನಾನು ನಟಿಸಿದ ಸಿನಿಮಾಗಳಲ್ಲಿ ಕ್ರೖೆಂ ಪ್ರಪಂಚದ ಅನಾವರಣ ಆಗಿರಲಿಲ್ಲ. ಅದು ‘ಟಗರು’ ಚಿತ್ರದಲ್ಲಿ ದಕ್ಕಿತು. ಡಾಲಿ ಅನ್ನೋ ಪಾತ್ರದ ಮೂಲಕ ನನ್ನೊಳಗಿನ ಒಬ್ಬ ಕೆಟ್ಟವನು ಹೊರಬಂದರೆ ಹೇಗಿರಬಹುದು ಎಂಬುದು ಅಲ್ಲಿ ಕಾಣಿಸಿತ್ತು. ಅದೇ ರೀತಿ ಸೀನನೂ ತುಂಬ ಪಾಠ ಕಲಿಸಿದ. ನಾಯಂಡಹಳ್ಳಿ ಮೋರಿ ಪಕ್ಕ ಮಲಗಬೇಕಿತ್ತು, ಚರಂಡಿಗಿಳಿಯಬೇಕಿತ್ತು. ಹಾಗೆ ಆ ಪಾತ್ರ ಮಾಡಿ ಬರುವಷ್ಟರಲ್ಲಿ, ನಿಜವಾಗಿಯೂ ಹಾಗೇ ಮಲಗುವವರ ಮನಸ್ಥಿತಿ ಅರ್ಥವಾಗಿತ್ತು. ಬದುಕಿಗೂ ಒಂದಷ್ಟು ಅರ್ಥ ಸಿಕ್ಕಂತಾಯ್ತು’ ಎನ್ನುತ್ತಾರೆ ಡಾಲಿ.

ಮಂಜು ಕೊಟಗುಣಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net