

ಬೆಂಗಳೂರು: ಪೃಥ್ವಿ ಅಂಬರ್ ಅಭಿನಯದ ‘ಶುಗರ್ಲೆಸ್’ ಚಿತ್ರವು ಜುಲೈ 14ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇನ್ನೂ ಒಂದು ವಿಷಯ ಗೊತ್ತಾ? ಬಿಡುಗಡೆಗೂ ಮುನ್ನವೇ ಬ್ಲಾಕ್ ಪ್ಯಾಂಥರ್ ಫಿಲಂಸ್ ಎಂಬ ಸಂಸ್ಥೆಯು ಚಿತ್ರದ ಹಿಂದಿ ರಿಮೇಕ್ ಹಕ್ಕುಗಳನ್ನು ಕೊಂಡಿದೆಯಂತೆ. ಅಷ್ಟೇ ಅಲ್ಲ, ಚಿತ್ರದ ಟಿವಿ ಮತ್ತು ಓಟಿಟಿ ಹಕ್ಕುಗಳು ಸಹ ಮಾರಾಟವಾಗಿವೆ.
ಅಲ್ಲಿಗೆ ನಿರ್ಮಾಪಕ ಕಂ ನಿರ್ದೇಶಕ ಶಶಿಧರ್ ಫುಲ್ ಖುಷಿಯಾಗಿದ್ದಾರೆ. ಪೃಥ್ವಿಗೆ ನಾಯಕಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದು, ಮಿಕ್ಕಂತೆ ದತ್ತಣ್ಣ, ಧರ್ಮಣ್ಣ, ಪದ್ಮಜಾ ರಾವ್, ನವೀನ್ ಪಡೀಲ್ ಮುಂತಾದವರು ನಟಿಸಿದ್ದಾರೆ. ದತ್ತಣ್ಣ ಈ ಹಿಂದೆ ಟಿಬಿ, ಲೆಪ್ರಸಿ ಕುರಿತು ಸಾಕ್ಷ್ಯಚಿತ್ರಗಳನ್ನು ಮಾಡಿದ್ದರಂತೆ. ಈಗ ಸಕ್ಕರೆ ಖಾಯಿಲೆ ಕುರಿತ ಚಿತ್ರದಲ್ಲಿ ನಟಿಸಿದ್ದಾರೆ. ‘ಇದು ಸಕ್ಕರೆ ಖಾಯಿಲೆ ಬಗ್ಗೆ ಹೆದರಬೇಡಿ ಎಂದು ಸಾರುವ ಚಿತ್ರ. ನಿಮ್ಮ ಆರೋಗ್ಯವನ್ನು ಸರಿಯಾಗಿ ನಿರ್ವಹಿಸಿದರೆ ಸಾಕು, ಆಗ ಯಾವುದೇ ಸಮಸ್ಯೆ ಇಲ್ಲದೆ ಬದುಕಬಹುದು ಎಂದು ಹೇಳುವ ಚಿತ್ರ. ಇಲ್ಲದಿದ್ದವರಿಗೆ ಬರಿಸಿಕೊಳ್ಳಬೇಡಿ ಎನ್ನುವುದರ ಜತೆಗೆ ಇದ್ದರೂ ಹೇಗೆ ನಿಭಾಯಿಸಬಹುದು ಎಂದು ತಿಳಿಸುವ ಚಿತ್ರ’ ಎಂದರು.
ಡಯಾಬಿಟಿಸ್ ಕುರಿತು ಇದುವರೆಗೂ ಯಾರೂ ಚಿತ್ರ ಮಾಡಿರಲಿಲ್ಲ ಎನ್ನುವ ಪೃಥ್ವಿ, ಇದೊಂದು ಫೀಲ್ ಗುಡ್ ಚಿತ್ರ ಎನ್ನುತ್ತಾರೆ. ಮೊದಲು ಪ್ರೇಮಿಯಾಗಿ ನಂತರ ಹೆಂಡತಿಯಾಗಿ ಕಾಣಿಸಿಕೊಂಡಿರುವ ಪ್ರಿಯಾಂಕಾ, ಕಮರ್ಷಿಯಲ್ ಅಂಶಗಳಿರುವ ಸದಭಿರುಚಿಯ ಚಿತ್ರ ಇದು ಎಂದು ಬಣ್ಣಿಸುತ್ತಾರೆ.