

ಬೆಂಗಳೂರು: ಸುಧೀರ್ ಅತ್ತಾವರ್ ನಿರ್ದೇಶನದ ವಿನೂತನ ಪ್ರಯೋಗಾತ್ಮಕ ಸಿನಿಮಾ 'ಮೃತ್ಯೋರ್ಮಾ' ಪ್ರತಿಷ್ಠಿತ ಎಂಟನೇ ರಾಜಸ್ಥಾನ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ. ಇದು ಮಾರ್ಚ್ 25ರಿಂದ 30ರ ವರೆಗೆ ಜಯಪುರ ಮತ್ತು ಜೋಧಪುರಗಳಲ್ಲಿ ನಡೆಯಲಿದೆ.
'ಬಿಡಿಟಿ ಅಭಿಯಂತರ ಚಿತ್ರ' ಅರ್ಪಿಸಿರುವ ಈ ಚಿತ್ರವನ್ನು 'ಸಕ್ಸಸ್ ಫಿಲಮ್ಸ್' ಮತ್ತು 'ಧೃತಿ ಕ್ರಿಯೇಷನ್ಸ್' ಬ್ಯಾನರ್‌ನಲ್ಲಿ ತ್ರಿವಿಕ್ರಮ ಬೆಳ್ತಂಗಡಿ ನಿರ್ಮಾಣ ಮಾಡಿದ್ದಾರೆ.
ಸುಧೀರ್ ಅತ್ತಾವರ್ ಕಳೆದ ಬಾರಿ ನಿರ್ದೇಶನ ಮಾಡಿದ್ದ 'ಮಡಿ' ಎಂಬ ಚಿತ್ರವು 'ರಿಫ್'ನಲ್ಲಿ 'ಗ್ಲೋಬಲ್ ಬೆಸ್ಟ್ ಸೋಷಿಯಲ್ ಅವೇರ್‌ನೆಸ್ ಫಿಲ್ಮ್' ಮತ್ತು 'ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ'ಗೆ ಪಾತ್ರವಾಗಿತ್ತು. ಅಲ್ಲದೆ 'ಮಡಿ' ಚಿತ್ರವನ್ನು ಬಾಲಿವುಡ್‌ನ ಹಲವು ಘಟಾನುಘಟಿ ಕಲಾವಿದರು ಮೆಚ್ಚಿಕೊಂಡಿದ್ದರು.
ಹೆಚ್ಚು ಗುಣಾತ್ಮಕ ಮನರಂಜನೀಯ ಸಿನಿಮಾಗಳನ್ನು ಗುರುತಿಸುತ್ತಿರುವ 'ರಿಫ್' ಚಿತ್ರೋತ್ಸವವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಚಿತ್ರೋತ್ಸವ ಎಂಬ ಹೆಗ್ಗಳಿಕೆಯನ್ನು ಪಡೆದುಕೊಳ್ಳುತ್ತಿದೆ. ಅಲ್ಲದೆ ಈ ಚಿತ್ರೋತ್ಸವವು ರಾಷ್ಟ್ರೀಯ ಮಟ್ಟದ ವಾಹಿನಿಗಳ ಗಮನವನ್ನೂ ಹೆಚ್ಚು ಸೆಳೆದುಕೊಳ್ಳುತ್ತಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಿನಿಮಾಗಳ ಮಾರುಕಟ್ಟೆ ವಿಸ್ತರಿಸುವ ನಿಟ್ಟಿನಲ್ಲಿ ಈಗಾಗಲೇ ದುಬೈನಲ್ಲಿ ಪ್ರೊಡಕ್ಷನ್ ಕಂಪನಿ ಆರಂಭಿಸಿರುವ 'ಸಕ್ಸಸ್ ಫಿಲಮ್ಸ್' ಸಂಸ್ಥೆಯು 'ಧೃತಿ ಕ್ರಿಯೇಷನ್ಸ್' ಜತೆ 'ಮೃತ್ಯೋರ್ಮಾ' ಸಿನಿಮಾದ ಅಂತಾರಾಷ್ಟ್ರೀಯ ಪ್ರೀಮಿಯರ್‌ನ ಯೋಜನೆ ಕೂಡ ಹಾಕಿಕೊಳ್ಳುತ್ತಿದೆ.
ನಿರ್ಮಾಪಕರಾಗಿ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಳ್ಳುತ್ತಿರುವ ತ್ರಿವಿಕ್ರಮ ಬೆಳ್ತಂಗಡಿ ಮತ್ತು ಮುಂಬೈ-ದುಬೈಗಳಲ್ಲಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿರುವ ಸುಧೀರ್ ಅತ್ತಾವರ್ ಅವರ ಜೋಡಿ ಸಿನಿಮಾ ನಿರ್ಮಾಣದ ಹೊಸ ಅವಿಷ್ಕಾರ ಮತ್ತು ಕಲ್ಪನೆಯೊಂದಿಗೆ ಹೊಸ ಹೆಜ್ಜೆ ಇಡುತ್ತಿದೆ.
ರಾಕೇಶ್ ಅಡಿಗ, ಹರ್ಷಿಕ ಪೂಣಚ್ಚ, ಸ್ಮಿತಾ, ಉಷಾ ಉತುಪ್ ಮೊದಲಾದವರು ನಟಿಸಿರುವ 'ಮೃತ್ಯೋರ್ಮಾ' ಚಿತ್ರಕ್ಕೆ 'ಅಮೃತಂಗಮಯ..' ಎನ್ನುವ ಟ್ಯಾಗ್‌ಲೈನ್ ಇದೆ. ಚಿತ್ರಕ್ಕೆ ವೀರ್ ಸಮರ್ಥ್ ಮತ್ತು ರವಿ ಬಸ್ರೂರ್ ಸಂಗೀತ, ವಿದ್ಯಾಧರ್ ಶೆಟ್ಟಿ ಸಂಕಲನ ಮತ್ತು ಎಂ.ಎಸ್. ಸತ್ಯು ಅವರ ಕಲಾ ನಿರ್ದೇಶನವಿದೆ.