ಕರ್ನಾಟಕದ ಕ್ಯಾಪ್ಟನ್ ಜಿ. ಆರ್. ಗೋಪಿನಾಥ್ ಜೀವನ ಆಧಾರಿತ ಸೂರರೈ ಪೊಟ್ರು ಕನ್ನಡಕ್ಕೆ ಡಬ್

Surya
Published on

ಕರ್ನಾಟಕದ ಕ್ಯಾಪ್ಟನ್ ಜಿ ಆರ್ ಗೋಪಿನಾಥ್ ಅವರ ಜೀವನವನ್ನು ಆಧರಿಸಿದ ತಮಿಳು ಚಿತ್ರ ಸೂರರೈ ಪೊಟ್ರು ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಲಿದೆ. ತಮಿಳಿನ ಖ್ಯಾತ ನಿರ್ದೇಶಕಿ ಸುಧಾ ಕೊಂಗಾರ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಹಾಸನದ ಗೊರೂರಿನ ಶಾಲಾ ಶಿಕ್ಷಕರೊಬ್ಬರ ಪುತ್ರ ಗೋಪಿನಾಥ್ , ಕನ್ನಡ ಮಾಧ್ಯಮದಲ್ಲಿ ಕಲಿತು ಸೈನ್ಯಕ್ಕೆ ಸೇರಿ ಕ್ಯಾಪ್ಟನ್ ಗೋಪಿನಾಥ್ ಆಗುತ್ತಾರೆ. ನಂತರ ಅಲ್ಲಿಂದ ಬಂದು ಏರ್ ಡೆಕ್ಕನ್ ಎಂಬ ವಿಮಾನಯಾನ ಸಂಸ್ಥೆಯನ್ನು ಆರಂಭಿಸಿ ಕಡಿಮೆ ಹಣದಲ್ಲಿ ವಿಮಾನಯಾನ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕುವ ಮೂಲಕ ಸಾಕಷ್ಟು ಜನರಿಗೆ ಸ್ಪೂರ್ತಿಯಾಗುತ್ತಾರೆ. ಈ ಕಥೆ ಈಗ ಸಿನಿಮಾವಾಗಿದ್ದು, ಗೋಪಿನಾಥ್ ಅವರ ಪಾತ್ರದಲ್ಲಿ ಸೂರ್ಯ ನಟಿಸಿದ್ದಾರೆ.

ಈಗಾಗಲೇ ಟ್ರೇಲರ್ ಗಳು ಪೋಸ್ಟರ್​ಗಳು ಒಂದು ಮಟ್ಟಿನ ಹೈಪ್ ಕ್ರಿಯೇಟ್ ಮಾಡಿವೆ. ಕನ್ನಡಿಗರೊಬ್ಬರ ಜೀವನ ಗಾಥೆಯನ್ನು ಕನ್ನಡದಲ್ಲಿ ತೋರಿಸಿದರೆ ಜನ ಹೆಚ್ಚು ನೋಡುತ್ತಾರೆ ಎಂಬ ಆಲೋಚನೆಯೊಂದಿಗೆ ಚಿತ್ರ ನಿರ್ಮಾಣ ಸಂಸ್ಥೆ ಕನ್ನಡದಲ್ಲಿ ಡಬ್ ಮಾಡಲು ತೀರ್ವನಿಸಿದೆ. ಜತೆಗೆ ಅಭಿಮಾನಿಗಳ ಒತ್ತಾಯದ ಮೇರೆಗೆ ಕನ್ನಡದಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರದ ಸಹ ನಿರ್ವಪಕ ರಾಜೇಶ್ ಪಾಂಡ್ಯನ್ ಟ್ವೀಟ್ ಮಾಡಿದ್ದಾರೆ. ಹಾಗಾಗಿ ಫೆಬ್ರವರಿ 21ರಂದೇ ಕನ್ನಡದ ಸಾಧಕರೊಬ್ಬರ ಕಥೆಯನ್ನು ಕನ್ನಡದಲ್ಲಿಯೇ ನೋಡಬಹುದು. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net