

ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಹಲವು ರಾಜಕಾರಣಿಗಳು, ಸೆಲೆಬ್ರಿಟಿಗಳು, ಜನಸಾಮಾನ್ಯರು ಬೊಮ್ಮಾಯಿ ಅವರಿಗೆ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿರುವುದಕ್ಕೆ ಅಭಿನಂದನೆಗಳನ್ನು ಸೂಚಿಸುತ್ತಿದ್ದಾರೆ.
ಇದೀಗ ನಟ ಸುದೀಪ್ ಸಹ ಹೊಸ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬೊಮ್ಮಾಯಿ ಅವರನ್ನು ಹಲವು ವರ್ಷಗಳಿಂದ ಬಲ್ಲ ಸುದೀಪ್, ಅವರನ್ನು ಮಾಮ ಎಂದು ಪ್ರೀತಿಯಿಂದ ಸಂಬೋಧಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸುದೀಪ್, 'ನಾನು ಅವರ ಸರಳತೆಯನ್ನು ನೋಡಿ ಬೆಳೆದವ. ನಾನು ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ಅವರು ಕೊಟ್ಟ ಸಹಕಾರ ಮತ್ತು ಪ್ರೋತ್ಸಾಹಗಳನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಆಲ್ ದಿ ಬೆಸ್ಟ್ ಮಾಮ ...' ಎಂದು ಸುದೀಪ್ ಬರೆದುಕೊಂಡಿದ್ದಾರೆ.